ಅನರ್ಹ ಶಾಸಕರು ಅನಾಥರಲ್ಲ

ಕಾರವಾರ‌, ಸೆ. ೨೦- ರಾಜಕೀಯ ದ್ವೇಷದಿಂದಾಗಿ ನಾವು ಅತಂತ್ರರಾಗಿದ್ದೇವೆಯೇ ಹೊರತು ಅನರ್ಹಗೊಂಡಿರುವ ಶಾಸಕರು ಹತಾಶರಾಗಿಲ್ಲ ಅನಾಥರೂ ಅಗಿಲ್ಲ ಎಂದು ಅನರ್ಹ ಶಾಸಕ ಶಿವರಾಂ ಹೆಬ್ಬಾರ್ ಇಂದಿಲ್ಲಿ ಹೇಳಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಅನುದಾನದ ಹಂಚಿಕೆಯಲ್ಲಿ ತಾರತಮ್ಯ, ಶಾಸಕರ ಕಡಗಣನೆಯಿಂದ ಬೇಸತ್ತು 17 ಮಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆವು, ಹೀಗಾಗಿ, ಸದನಕ್ಕೆ ಹಾಜರಾಗಿರಲಿಲ್ಲ. ಇದನ್ನೇ ನೆಪ ಮಾಡಿಕೊಂಡು ನಮ್ಮನ್ನು ಅನರ್ಹಗೊಳಿಸಲಾಗಿದೆ ಎಂದು ಹೇಳಿದರು.

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಯಂಘೋಷಿತ ಬುದ್ಧಿವಂತ, ಮಾಜಿ ಸ್ವೀಕರ್ ರಮೇಶ್ ಕುಮಾರ್ ಅವರ ರಾಜಕೀಯ ಪ್ರೇರಿತವಾದ ತೀರ್ಪಿಗೆ ಬಲಿಯಾಗಿದ್ದೇವೆ. ನ್ಯಾಯಾಲಯದಲ್ಲಿ ನಮಗೆ ಜಯಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ರಾಜೀನಾಮೆ ನೀಡಿದ ಬಳಿಕ ಶಾಸಕರು ಸದನಕ್ಕೆ ಹಾಜರಿರುವ ಬಗ್ಗೆ ಸುಪ್ರೀಂಕೋರ್ಟ್ ಯಾವುದೇ ನಿರ್ದೇಶನ ನೀಡಿಲ್ಲ. ಕಾಂಗ್ರೆಸ್ ನಾಯಕರ ಒತ್ತಡಕ್ಕೊಳಗಾಗಿ ರಮೇಶ್ ಕುಮಾರ್ ನಮ್ಮನ್ನು ಅನರ್ಹಗೊಳಿಸಿದ್ದಾರೆ ಎಂದು ದೂರಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ನಾನೊಬ್ಬನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾವೆಲ್ಲೂ ಬಿಜೆಪಿ ಸೇರುತ್ತೇವೆ ಎಂದು ಹೇಳಿಲ್ಲ. ನ್ಯಾಯಾಲಯದ ತೀರ್ಪಿಗಾಗಿ ಎದುರು ನೋಡುತ್ತಿದ್ದೇವೆ ಎಂದರು.

ನ್ಯಾಯಾಲಯದಲ್ಲಿ ಬರುವ ತೀರ್ಪನ್ನು ಸ್ವಾಗತಿಸುತ್ತೇವೆ, ಆ ಬಳಿಕ ಕಾಂಗ್ರೆಸ್ ನಾಯಕರ ಒತ್ತಡ ತಂತ್ರವನ್ನು ಬಹಿರಂಗಪಡಿಸುವುದಾಗಿ ಬಾಂಬ್ ಸಿಡಿಸಿದ್ದಾರೆ.

Leave a Comment