ಅನರ್ಹರ ಹಿತರಕ್ಷಣೆ ಬಿಎಸ್‌ವೈ ಹರಸಾಹಸ: ಎಚ್‌ಡಿಕೆ ಆರೋಪ

ಬೆಂಗಳೂರು, ಸೆ. ೨೨- ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲದ ಸಂತ್ರಸ್ಥ ಅನರ್ಹರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಭಾವ ಬಳಸಿ, ಬಚಾವ್ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಸಂಭವಿಸಿದ ನೆರೆ ಸಂತ್ರಸ್ಥರಿಗೆ ಪರಿಹಾರ ಧನ ಸಹಾಯ ಕೇಳಲು ಸಮಯಾವಕಾಶವಿಲ್ಲ. ಆದರೆ ಅನರ್ಹರನ್ನು ರಕ್ಷಿಸಲು ದೆಹಲಿಗೆ ತೆರಳಿದ್ದಾರೆ ಎಂದು ಟ್ವೀಟರ್‌ನಲ್ಲಿ ಆರೋಪಿಸಿದ್ದಾರೆ.

.ನೆರೆ ಪರಿಹಾರ ಕೋರಲು ದೆಹಲಿಗೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿರುವುದು ರಾಜಕೀಯ ನಾಟಕ. ಅಮಿತ್ ಶಾ ಅವರ ಪ್ರಭಾವ ಬೆಳೆಸಿ ಅನರ್ಹ ಶಾಸಕರನ್ನು ಬಚಾವ್ ಮಾಡಲಷ್ಟೇ ಹೋಗಿದ್ದಾರೆ. ತಮ್ಮ ಆಸ್ತಿತ್ವವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಕುತಂತ್ರದ ರಾಜಕಾರಣ ಹೆಚ್ಚು ದಿನ ಇರಲಾರದು ಎಂದು ಮಾರ್ಮಿಕವಾಗಿ ಟ್ವೀಟ್ ಮೂಲಕ ಆರೋಪಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ರಾಜ್ಯದ 17 ಜಿಲ್ಲೆಗಳು ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿವೆ. ಲಕ್ಷಾಂತರ ಮಂದಿ ಮನೆ, ಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ನೆರೆಸಂತ್ರಸ್ಥರ ನೆರೆವಿಗೆ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಬಿಡಿಗಾಸು ನೀಡದೆ ನಿರ್ಲಕ್ಷ್ಯ ತಾಳಿರುವುದು ಸಹಜವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬಿಸಿತುಪ್ಪವಾಗಿ ಪರಿಣಿಮಿಸಿದೆ ಎಂದು ದೂರಿದ್ದಾರೆ.

ಕೇಂದ್ರದಲ್ಲಿ ತಮ್ಮ ಪಕ್ಷದವರೇ ಅಧಿಕಾರದಲ್ಲೇ ಇದ್ದರೂ ಸಹ ಇಲ್ಲಿಯತನಕ ನೆರೆಸಂತ್ರಸ್ಥರಿಗೆ ಪರಿಹಾರ ಕೊಡಿಸುವಲ್ಲಿ ಬಿಎಸ್‌ವೈ ವಿಫಲರಾಗಿದ್ದಾರೆ. ತಮ್ಮ 25 ಮಂದಿ ಸಂಸದರು ಕೇಂದ್ರದ ನಾಯಕರ ಜೊತೆ ಮಾತನಾಡುವಷ್ಟು ಧೈರ್ಯವಿಲ್ಲ. ಇಂತಹ ವ್ಯಕ್ತಿಗಳಿಂದ ಅಭಿವೃದ್ಧಿ ಕಾಣಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಸದ್ಯದಲ್ಲೇ ಈ ಸರ್ಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

Leave a Comment