ಅನರ್ಹರ ಭವಿಷ್ಯ ಶಾ-ಬಿಎಸ್‌ವೈ ಚರ್ಚೆ

ನವದೆಹಲಿ, ಸೆ. ೨೨- ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೆ ದೆಹಲಿಗೆ ದೌಡಾಯಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅನರ್ಹ ಶಾಸಕರ ರಾಜಕೀಯ ಭವಿಷ್ಯದ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ಜತೆ ಸುದೀರ್ಘ ಚರ್ಚೆ ನಡೆಸಿದ್ದು, ನಾಳೆ ಸುಪ್ರೀಂಕೋರ್ಟಿನಲ್ಲಿ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಏನಾಗಲಿದೆ ಎಂಬುದನ್ನು ನೋಡಿಕೊಂಡು ಈ ವಿಚಾರದಲ್ಲಿ ಮುಂದಿನ ಹೆಜ್ಜೆ ಇಡುವ ತೀರ್ಮಾನಕ್ಕೆ ಬರಲಾಗಿದೆ.

ಇಂದು ಬೆಳಿಗ್ಗೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರನ್ನು ದೆಹಲಿಯ ಕೃಷ್ಣಮೆನನ್ ಮಾರ್ಗದಲ್ಲಿರುವ ಅವರ ನಿವಾಸದಲ್ಲಿ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಇವರ ಜತೆಗೂಡಿ ಭೇಟಿ ಮಾಡಿದ್ದ ಯಡಿಯೂರಪ್ಪನವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿರುವ ಅನರ್ಹ ಶಾಸಕರ ರಾಜಕೀಯ ಭವಿಷ್ಯವನ್ನು ಕಾಪಾಡುವ ಮಾರ್ಗೋಪಾಯಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಅನರ್ಹ ಶಾಸಕರ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿರುವುದರಿಂದ ಅನರ್ಹ ಶಾಸಕರು ಆತಂಕಗೊಂಡಿದ್ದಾರೆ. ಅವರಿಗೆ ನ್ಯಾಯ ಒದಗಿಸಿ ಅವರ ರಾಜಕೀಯ ಭವಿಷ್ಯವನ್ನು ಕಾಪಾಡುವ ಜವಾಬ್ದಾರಿ ನಮ್ಮದ್ದಾಗಿದೆ. ಹಾಗಾಗಿ, ಅವರ ರಾಜಕೀಯ ಭವಿಷ್ಯ ಅತಂತ್ರವಾಗದಂತೆ ನೋಡಿಕೊಳ್ಳುವ ಮಾತು ಕೊಟ್ಟಿದ್ದೇವೆ, ಅದನ್ನು ಕಾಯ್ದುಕೊಳ್ಳುವ ಅಗತ್ಯತೆಯನ್ನು ಯಡಿಯೂರಪ್ಪರವರು ಅಮಿತ್ ಶಾರವರ ಮುಂದೆ ಪ್ರತಿಪಾದಿಸಿದ್ದು, ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಅಮಿತ್ ಶಾರವರು, ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಅನರ್ಹ ಶಾಸಕರ ವಿಚಾರದಲ್ಲಿ ಈ ಹಿಂದೆ ನೀಡಿದ್ದ ಮಾತನ್ನು ಉಳಿಸಿಕೊಳ್ಳೋಣ ಅದರಲ್ಲಿ ಎರಡು ಮಾತಿಲ್ಲ. ನಾಳೆ ಸುಪ್ರೀಂಕೋರ್ಟಿನಲ್ಲಿ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಏನಾಗಲಿದೆ ಎಂಬುದನ್ನು ನೋಡಿಕೊಂಡು ಮುಂದಿನ ಮಾರ್ಗೋಪಾಯಗಳನ್ನು ಕಂಡುಕೊಳ್ಳೋಣ ಎಂದು ಅಮಿತ್ ಶಾ ಸಲಹೆ ಮಾಡಿದರು ಎನ್ನಲಾಗಿದೆ.
ನಾಳೆ ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ಪರವಾಗಿ ತೀರ್ಪು ಬಂದರೆ ಅವರಿಗೆ ಬಿಜೆಪಿ ಟಿಕೆಟ್‌ಗಳನ್ನುನೀಡಿ ಚುನಾವಣೆಯಲ್ಲಿ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ. ಒಂದು ವೇಳೆ ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ವಿರುದ್ಧವಾಗಿ ಆದೇಶ ಬಂದರೆ ಆಗ ಅವರು ಹೇಳುವವರಿಗೆ ಚುನಾವಣೆ ಟಿಕೆಟ್ ನೀಡುವ ಬಗ್ಗೆಯೂ ಚರ್ಚೆಗಳು ನಡೆದವು ಎಂದು ಹೇಳಲಾಗಿದೆ.

ಅನರ್ಹ ಶಾಸಕರಿಂದ ಸರ್ಕಾರ ಬಂದಿದೆ, ಅವರ ಹಿತ ಕಾಯುವುದು ನಮ್ಮೆಲ್ಲರ ಜವಾಬ್ದಾರಿ ಅದರಂತೆ ಅವರ ರಾಜಕೀಯ ಭವಿಷ್ಯಕ್ಕೆ ಬಾಧಕವಾಗದಂತೆ ನೋಡಿಕೊಳ್ಳೋಣ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ ಎನ್ನಲಾಗಿದೆ.

ನಾಳೆ ಸುಪ್ರೀಂಕೋರ್ಟಿನ ವಿಚಾರಣೆ ಏನಾಗುತ್ತದೆ ಎಂಬುದನ್ನು ನೋಡಿಕೊಂಡು ಮತ್ತೆ ಎಲ್ಲರೂ ಸೇರಿ ಚರ್ಚಿಸಿ ಒಂದು ತೀರ್ಮಾನ ಕೈಗೊಳ್ಳೋಣ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ಗೊತ್ತಾಗಿದೆ. ನಾಳಿನ ಸುಪ್ರೀಂಕೋರ್ಟ್‌ನ ವಿಚಾರಣೆಯನ್ನು ನೋಡಿಕೊಂಡು ಮತ್ತೆ ಅಮಿತ್ ಶಾರವರು ಮುಖ್ಯಮಂತ್ರಿ ಯಡಿಯೂರಪ್ಪನವರ ಜತೆ ಚರ್ಚೆ ನಡೆಸಿ, ಅನರ್ಹ ಶಾಸಕರ ವಿಚಾರದಲ್ಲಿ ಒಂದು ನಿರ್ಧಾರ ಕೈಗೊಳ್ಳುವರು.

ಅನರ್ಹ ಶಾಸಕರ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಉತ್ತಮ ವಕೀಲರಿಂದ ಸಲಹೆ-ಸೂಚನೆಗಳನ್ನು ಪಡೆದು ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಿ ಪ್ರಕರಣದಲ್ಲಿ ಅನರ್ಹ ಶಾಸಕರ ಪರವಾಗಿ ತೀರ್ಪು ಬರುವಂತೆ ನೋಡಿಕೊಳ್ಳುವ ಬಗ್ಗೆಯೂ ಚರ್ಚೆಗಳು ನಡೆದಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಾನೂನು ತಜ್ಞರ ಜತೆ ಚರ್ಚೆ ನಡೆಸುವಂತೆಯೂ ಅಮಿತ್ ಶಾ ಸಲಹೆ ಮಾಡಿದ್ದಾರೆನ್ನಲಾಗಿದೆ. ನಾಳಿನ ಸುಪ್ರೀಂಕೋರ್ಟಿನ ವಿಚಾರಣೆ ನಂತರವೇ ಅನರ್ಹ ಶಾಸಕರ ಭವಿಷ್ಯ ಏನಾಗಲಿದೆ ಎಂಬುದು ಸ್ಪಷ್ಟವಾಗಲಿದೆ.

ಸುಪ್ರೀಂಕೋರ್ಟ್‌ನ ವಿಚಾರಣೆ ಮುಗಿಯುವವರೆಗೂ ಅನರ್ಹ ಶಾಸಕರ ಆತಂಕ-ಗೋಳು ತಪ್ಪಿದ್ದಲ್ಲ. ಇಂದು ಪಕ್ಷದ ಅಧ್ಯಕ್ಷ ಅಮಿತ್ ಶಾರವರನ್ನು ಭೇಟಿ ಮಾಡಿದ ನಂತರ ಯಡಿಯೂರಪ್ಪನವರು ದೆಹಲಿಯಲ್ಲೇ ಕಾನೂನು ತಜ್ಞರ ಜತೆ ಸಹ ಚರ್ಚೆ ನಡೆಸಿ ಅನರ್ಹ ಶಾಸಕರ ಪ್ರಕರಣದ ಸಾಧಕ-ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಅನರ್ಹ ಶಾಸಕರು ಒತ್ತಡ ಹೇರಿ ನ್ಯಾಯ ದೊರಕಿಸುವಂತೆ ಪಟ್ಟುಹಿಡಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೇ ದೆಹಲಿಗೆ ಬಂದಿರುವ ಯಡಿಯೂರಪ್ಪನವರು ಇಂದು ಅಮಿತ್ ಶಾ ಭೇಟಿ ನಂತರ ರಾಜ್ಯಕ್ಕೆ ಸಂಜೆ ವಾಪಸ್ಸಾಗುವರು.

ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿಗೆ ದೌಡಾಯಿಸಿದ ಬೆನ್ನಲ್ಲೆ ಕೆಲ ಅನರ್ಹ ಶಾಸಕರೂ ಸಹ ದೆಹಲಿಗೆ ತೆರಳಿದ್ದಾರೆ. ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಇರುವುದರಿಂದ ಎಲ್ಲ ಅನರ್ಹ ಶಾಸಕರು ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ.

Leave a Comment