ಅನರ್ಹರ ಬಗ್ಗೆ ಶಾ ಜತೆ ಚರ್ಚಿಸಿಲ್ಲ -ಸಿಎಂ

ಬೆಂಗಳೂರು, ಸೆ. ೨೨- ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರ ಜತೆ ಅನರ್ಹ ಶಾಸಕರ ಬಗ್ಗೆ ಚರ್ಚೆ ಮಾಡಿಲ್ಲ, ಅಂತಹ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ದೆಹಲಿಯ ಕೃಷ್ಣಮೆನನ್ ಮಾರ್ಗದಲ್ಲಿರುವ ಅಮಿತ್ ಶಾರವರ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಮಿತ್ ಶಾರವರ ಜತೆ ಅನರ್ಹ ಶಾಸಕರ ವಿಚಾರ ಚರ್ಚೆ ಮಾಡಿಲ್ಲ ಎಂದರು.

ರಾಜ್ಯದ ನೆರೆ ಪರಿಹಾರ ಕಾರ್ಯಗಳಿಗೆ ಇದುವರೆಗೂ ಕೇಂದ್ರದಿಂದ ಮೊದಲ ಕಂತಿನ ಹಣ ಬಿಡುಗಡೆಯಾಗಿಲ್ಲ, ಹಣ ಬಿಡುಗಡೆಗೆ ಮನವಿ ಮಾಡಿದ್ದೇನೆ ಎಂದರು. ನೆರೆ ಪರಿಹಾರ ಕಾರ್ಯಗಳಿಗೆ ಮೊದಲ ಕಂತಾಗಿ 2 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಶೀಘ್ರದಲ್ಲೇ ಹಣ ಬಿಡುಗಡೆ ಮಾಡುವ ಭರವಸೆಯನ್ನು ಕೇಂದ್ರ ಗೃಹ ಸಚಿವರು ಆದ ಅಮಿತ್ ಶಾ ನೀಡಿದ್ದಾರೆ ಎಂದರು.

ಕೇಂದ್ರ ಗೃಹ ಸಚಿವರಾದ ಅಮಿತ್ ಶಾರವರವರೇ ನೆರೆ ಪರಿಸ್ಥಿತಿ ವೀಕ್ಷಣೆ ನಡೆಸಿದ್ದಾರೆ. ಎಲ್ಲವೂ ಅವರಿಗೆ ಅರಿವಿದೆ. ಅಮೆರಿಕಾದಿಂದ ಪ್ರಧಾನಿ ಮೋದಿ ಅವರು ವಾಪಸ್ಸಾದ ಬಳಿಕ ಅವರ ಜತೆ ಚರ್ಚಿಸಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ತಪ್ಪು ಮಾತು
ರಾಜ್ಯದ ನೆರೆ ಪರಿಹಾರ ಕಾರ್ಯಗಳಿಗೆ ಕೇಂದ್ರದ ಬಳಿ ಪರಿಹಾರ ಕೇಳುವ ಅಗತ್ಯವಿಲ್ಲವೆಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಕಿಡಿಕಾರಿದ ಯಡಿಯೂರಪ್ಪನವರು, ತೇಜಸ್ವಿ ಸೂರ್ಯ ಹೀಗೆಲ್ಲ ಮಾತನಾಡಬಾರದು ಎಂದು ತಾಕೀತು ಮಾಡಿ ಅವರ ಹೇಳಿಕೆ ಸರಿಯಲ್ಲ ಎಂದರು.

Leave a Comment