ಅನರ್ಹ”ರಿಗೆ  ಸಚಿವ ಸ್ಥಾನದ  ಭರವಸೆ;  ಮುಖ್ಯಮಂತ್ರಿ  ಯಡಿಯೂರಪ್ಪ ನೀತಿ ಸಂಹಿತೆ ಉಲ್ಲಂಘನೆ;   ಸಿದ್ದರಾಮಯ್ಯ ಆರೋಪ

ಮೈಸೂರು, ನ 16-  ಡಿಸೆಂಬರ್ 5 ರಂದು  ನಡೆಯಲಿರುವ  ಉಪ ಚುನಾವಣೆಯಲ್ಲಿ  ಬಿಜೆಪಿ ಅಭ್ಯರ್ಥಿಗಳಾಗಿರುವ ಎಲ್ಲ ಅನರ್ಹ ಶಾಸಕರನ್ನು  ತಮ್ಮ ಸಂಪುಟಕ್ಕೆ  ಸೇರಿಸಿಕೊಳ್ಳುವುದಾಗಿ ಬಹಿರಂಗವಾಗಿ   ಘೋಷಿಸುವ ಮೂಲಕ  ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ  ನೀತಿ ಸಂಹಿತೆಯನ್ನು  ಸ್ಪಷ್ಟವಾಗಿ  ಉಲ್ಲಂಘಿಸಿದ್ದಾರೆ ಎಂದು  ಪ್ರತಿಪಕ್ಷ ನಾಯಕ  ಸಿದ್ದರಾಮಯ್ಯ   ಶನಿವಾರ  ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ  ಅವರು,   ಮುಖ್ಯಮಂತ್ರಿಯಾಗಿ  ಬಿ.ಎಸ್. ಯಡಿಯೂರಪ್ಪ  ಖುದ್ದು,  ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು,  ಅವರು   ಅಧಿಕಾರದಲ್ಲಿ ಮುಂದುವರಿಯುವ  ನೈತಿಕತೆಯನ್ನು ಕಳೆದುಕೊಂಡಿದ್ದಾರೆ    ಸಿದ್ದರಾಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡರು.

ಬಿಜೆಪಿ  ಚುನಾವಣಾ ಅಕ್ರಮಗಳಲ್ಲಿ   ನಿರತವಾಗಿದೆ.  ಮೈಸೂರಿನಲ್ಲಿ   ಮತದಾರರಿಗೆ  ವಿತರಿಸಲು ತಂದಿದ್ದ  ಸೀರೆಗಳನ್ನು  ಪೊಲೀಸರು ವಶಪಡಿಸಿಕೊಂಡಿರುವುದನ್ನು  ನೋಡಿದರೆ,  ವ್ಯಾಪಕ ಅಕ್ರಮಗಳಲ್ಲಿ   ಬಿಜೆಪಿ   ನಿರತವಾಗಿದೆ  ಎಂದು ಆರೋಪಿಸಿದರು.

ಸರಳ ಬಹುಮತಕ್ಕೆ ಅಗತ್ಯವಿರುವ   ಕನಿಷ್ಟ  8 ಕ್ಷೇತ್ರಗಳಲ್ಲೂ   ಕೇಸರಿ ಪಕ್ಷ  ಜಯಗಳಿಸುವುದಿಲ್ಲ ಎಂದು  ಭವಿಷ್ಯ ನುಡಿದ ಅವರು,  ಉಪ ಚುನಾವಣೆಯ ನಂತರ ಬಿಜೆಪಿ ಸರ್ಕಾರ  ತೀವ್ರ ಸಂಕಷ್ಟಕ್ಕೆ ತುತ್ತಾಗಲಿದೆ ಎಂದರು.

ರಾಜ್ಯದ  ಅಭಿವೃದ್ದಿಗಾಗಿ  ಅನರ್ಹ  ಶಾಸಕರು   ತಮ್ಮ ಸ್ಥಾನಗಳಿಗೆ ರಾಜೀನಾಮೆ  ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ,    ತಮ್ಮ  ಸ್ವಾರ್ಥಕ್ಕಾಗಿ  ಅವರು ರಾಜೀನಾಮೆ ನೀಡಿದ್ದಾರೆ ಎಂದು    ಟೀಕಿಸಿದರು.

 

Leave a Comment