ಅನನ್ಯ ಅನುಭವ ನೀಡಿದ ‘’ಪೌಲಸ್ತ್ಯನ ಪ್ರಣಯ ಕಥೆ ” ನಾಟಕ

ನಾಟಕಗಳನ್ನು ನೋಡುವ ಸಡಗರ-ಸಂತಸವೇ ಬೇರೆ. ಪರದೆಯ ಮೇಲೆ ಚಲನಚಿತ್ರಗಳನ್ನು ನೋಡಿದಂತಲ್ಲ. ಎದುರಿಗೆ ಕಾಣುವ ಜೀವಂತ ವ್ಯಕ್ತಿಗಳ ಅಭಿನಯ, ಕಣ್ತುಂಬುವ ದೃಶ್ಯಾವಳಿಗಳ ಸ್ಪಂದನವೇ ಭಿನ್ನ. ನಾಟಕಾಸಕ್ತರು ನಾಟಕಗಳು ಎಲ್ಲಿ ನಡೆದರೂ ಹುಡುಕಿಕೊಂಡು ಹೋಗುತ್ತಾರೆ. ಅದನ್ನು ನೋಡಿದ ತೃಪ್ತಿ-ಸ್ಪಂದನಗಳೇ ಬೇರೆಯಾದ್ದರಿಂದ ಇಂದು ನಗರದಲ್ಲಿ ನಾಟಕ ಚಟುವಟಿಕೆಗಳು ಸಾಕಷ್ಟು ನಡೆಯುತ್ತಿವೆ. ನಾಟಕದಲ್ಲಿ ಅಭಿನಯಿಸಲು ಯುವಜನರು ಉತ್ಸುಕರಾಗಿದ್ದಾರೆ.
ಇತ್ತೀಚಿಗೆ ಮಲ್ಲೇಶ್ವರದ ‘ಸೇವಾಸದನ’ದಲ್ಲಿ ಸಂಧ್ಯಾ ಕಲಾವಿದರು ಅಭಿನಯಿಸಿದ ನಾಟಕ ‘ಪೌಲಸ್ತ್ಯನ ಪ್ರಣಯ ಕಥೆ’ ತನ್ನ ವೈಶಿಷ್ಟ್ಯದಿಂದ ರಂಗಾಭಿಮಾನಿಗಳ ಮನದಲ್ಲಿ ಸ್ಮರಣೀಯ ಛಾಪನ್ನು ಒತ್ತಿತು ಎಂದರೆ ಅತಿಶಯೋಕ್ತಿಯಲ್ಲ. ಖ್ಯಾತ ‘ಕಲಾಪ್ರೇಮಿ ಫೌಂಡೆಶನ್’ ಪ್ರತಿತಿಂಗಳೂ ತಪ್ಪದೆ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಗರದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಸುಗಮ ಸಂಗೀತದ ಹರಿಕಾರ ಖ್ಯಾತ ಸಂಗೀತ ಸಂಯೋಜಕ ಶ್ರೀ ಪದ್ಮಚರಣ್ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಸಂಧ್ಯಾಕಲಾವಿದರ ನಾಟಕ ಒಂದು ಸಾರ್ಥಕ ಕಾರ್ಯಕ್ರಮ. ಮೊದಲಿಗೆ ಪದ್ಮಚರಣರ ಅಪೂರ್ವ ಸಾಧನೆಯ ಪಯಣದ ಬಗ್ಗೆ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಆನಂತರ ಪದ್ಮಚರಣ್ ಸಂಗೀತ ಸಂಯೋಜಿಸಿದ ‘ಪೌಲಸ್ತ್ಯನ ಪ್ರಣಯ ಕಥೆ’ ಅದ್ಭುತ ನಾಟಕದ ಯಶಸ್ವೀ ಪ್ರದರ್ಶನವಾಗಿ, ಅವರ ಸಂಗೀತ ಸಂಯೋಜನೆಯ ಅಸ್ಮಿತೆಯನ್ನು ಪ್ರಕಟಪಡಿಸಿತು.
ಮಹಾರಾವಣನ ಹೊಸದರ್ಶನ ಮಾಡಿಸಿದ ಈ ನಾಟಕ ಎರಡೂವರೆ ಗಂಟೆಗಳ ಕಾಲ ನೋಡುಗರನ್ನು ಹಿಡಿದು ಕೂರಿಸಿದ್ದು ವಿಶೇಷವೇ ಸರಿ. ಸಂಪೂರ್ಣ ಪ್ರೇಕ್ಷಕರನ್ನು ತನ್ನೊಳಗೆ ತೊಡಗಿಸಿಕೊಂಡ ‘ರಾವಣ’ ನಿಜಾರ್ಥದಲ್ಲಿ ಮೋಡಿ ಮಾಡಿದ ಎನ್ನಬಹುದೇನೋ. ಇಲ್ಲಿ ಕಾಣಿಸಿಕೊಳ್ಳುವ ಎಲ್ಲ ಪಾತ್ರಗಳೂ ರಾಮಾಯಣದಲ್ಲಿ ಕಂಡುಬರುವ ಪಾತ್ರಗಳೇ. ಆದರೆ ಅವರ ಪಾತ್ರಚಿತ್ರಣಗಳು ಮಾತ್ರ ಹೊಸ ಆಯಾಮದಲ್ಲಿ ಆವಿರ್ಭವಿಸಿದ್ದವು
ಹೊಸ ಆವಿಷ್ಕಾರದ ‘ಪೌಲಸ್ಥ್ಯನ ಪ್ರಣಯ ಕಥೆ’ ಲತಾ ಅವರ ತೆಲುಗಿನ ಕಾದಂಬರಿ. ವಂಶಿಯವರಿಂದ ಅದು ಕನ್ನಡಕ್ಕೆ ಅನುವಾದಿತವಾಗಿ, ನಂತರ ಅದು ಹಿರಿಯ ನಾಟಕಕಾರ-ನಟ- ನಿರ್ದೇಶಕ ಎಸ್.ವಿ.ಕೃಷ್ಣ ಶರ್ಮ ಅವರಿಂದ ರೋಚಕ, ಚಿಂತನಾಪರ ಅದ್ಭುತ ನಾಟಕವಾಗಿ ಹೊರಹೊಮ್ಮಿದೆ.
ರಾವಣನ ದೃಷ್ಟಿಯಲ್ಲಿ ಸೃಷ್ಟಿ ತಳೆವ ಈ ಹೊಸ ಆಯಾಮದ ನಾಟಕದಲ್ಲಿ, ರಾಮಾಯಣದ ನಡೆ ಕುತೂಹಲ ಕೆರಳಿಸುತ್ತದೆ. ರಾಮಾಯಣದ ಸಮಷ್ಟಿ ಕಥೆಯನ್ನು ರಸೋತ್ಪತ್ತಿ ಸಂಭಾಷಣೆಗಳಿಂದ , ಪರಿಣಾಮಕಾರಿ ಸನ್ನಿವೇಶಗಳ ಸೃಷ್ಟಿಯಿಂದ ಹರಿತ ನಿರ್ದೇಶನದಿಂದ ಸಿಂಹಾವಲೋಕನ ಕ್ರಮದಿಂದ ಕಟ್ಟಿಕೊಡುವ ಈ ‘ಪೌಲಸ್ಥ್ಯನ ಪ್ರಣಯ ಕಥೆ ’ ನಾಟಕ ಬಹುಕಾಲ ನೆನಪಿನಲ್ಲುಳಿಯುವಂಥದು.

drama1
ಅರಣ್ಯಕಾಂಡ ದಿಂದ ಸುಂದರಕಾಂಡ ದವರೆಗಿನ ಎಲ್ಲ ಘಟನೆಗಳನ್ನೂ ವಿಷ್ಕಂಭಕವಾಗಿ ಕೇವಲ ಹನ್ನೆರೆಡು ನಿಮಿಷಗಳಲ್ಲಿ ನಿರೂಪಿಸುವ ರಂಗತಂತ್ರ ಅಪೂರ್ವವಾಗಿದೆ. ರಂಗದ ನಿಗದಿತ ಮೂರುಭಾಗಗಳಲ್ಲಿ , ನೆರಳು ಬೆಳಕಿನ ತಂತ್ರಗಳಲ್ಲಿ ಸಂಭವಿಸುವ ಘಟನೆಗಳು ನೂತನ ಅನುಭವವನ್ನು ನೀಡಿದವು.
ಹುಣ್ಣಿಮೆಯ ಪೂರ್ಣಚಂದಿರನ ಸುಂದರ ಕಲಾತ್ಮಕ ದೃಶ್ಯದ ಹಿನ್ನಲೆಯಲ್ಲಿ ತೆರೆದುಕೊಳ್ಳುವ ನಾಟಕ, ರಾವಣ ದಂಡಕದ ಸುಶ್ರಾವ್ಯ ಹಾಡಿನೊಂದಿಗೆ ರಾವಣ ಮತ್ತು ದೇವಲೋಕದ ಸುಂದರಿ ರಂಭೆಯ ನಡುವಣ ಗಂಭೀರ ಚರ್ಚೆ, ನಡುನಡುವೆ ಕುಚೋದ್ಯ, ವಿನೋದಗಳ ಲಹರಿಯಲ್ಲಿ ಹಿಡಿದಿಟ್ಟುಕೊಳ್ಳುವ ಗುಣ ಪ್ರಕಟಿಸುತ್ತದೆ.
ಇಲ್ಲಿನ ರಾವಣ ಖಳನಾಯಕನಲ್ಲ, ಪ್ರತಿನಾಯಕ, ಕಥಾ ನಾಯಕನೂ ಹೌದು. ಮನುಷ್ಯಸಹಜ ಗುಣಗಳಿಂದ ಕೂಡಿದ ರಾವಣ, ಮಹಾ ಸಂಗೀತಜ್ಞ, ವೈಣಿಕ, ಕವಿ, ವಾಗ್ಮಿ, ರಸಿಕ, ಒಳ್ಳೆಯ ಪತಿ, ಪ್ರೇಮಿ, ಅಣ್ಣ , ಉತ್ತಮ ರಾಜ ಹಾಗೆಯೇ ದೌರ್ಬಲ್ಯಗಳ ದಾಸನೂ ಹೌದು. ವಾಲಿಯಿಂದ ಎರಡು ಬಾರಿ ಬಲಾತ್ಕರಿಸಲ್ಪಟ್ಟ ಮಂಡೋದರಿಯನ್ನು ಧರ್ಮಪತ್ನಿಯಾಗಿ ಸ್ವೀಕರಿಸಿ ಪಟ್ಟದರಾಣಿಯನ್ನಾಗಿ ಮಾಡಿಕೊಳ್ಳುವಂಥ ಹೃದಯವೈಶಾಲ್ಯ ತೋರಿದವ, ಸೀತೆ ತನ್ನ ಹೆಂಡತಿಯ ಮಗಳೆಂದು ತಿಳಿದು ಅವಳ ಯೋಗಕ್ಷೇಮಕ್ಕಾಗಿ ತೌರಿಗೆ ಕರೆತರುವ ಸದುದ್ದೇಶದಿಂದ ಸೀತಾಪಹರಣದ ಅಪವಾದವನ್ನೂ ಲೆಕ್ಕಿಸದೆ ಮಗಳನ್ನು ತೌರಿಗೆ ಕರೆತರುವ ಉದಾರಿ.
ರಾವಣ ಹಾಗೂ ಸೀತೆಯ ನಡುವಣ ಸಂಭಾಷಣೆಯಿಂದ ತಂದೆ-ಮಗಳಷ್ಟೇ ಪ್ರೇಕ್ಷಕರೂ ಭಾವುಕರಾಗುತ್ತಾರೆ. . ಇಲ್ಲಿ ಪ್ರತಿಯೊಂದು ಪಾತ್ರಗಳೂ ತುಂಬ ಅರ್ಥಪೂರ್ಣವಾಗಿ ಚಿತ್ರಿತವಾಗಿದ್ದು, ಕುತೂಹಲ ಕೆನೆಗಟ್ಟುತ್ತದೆ..
ಇವೆಲ್ಲಕ್ಕಿಂತ ಮಹತ್ತರವಾಗಿ ನಿಲ್ಲುವುದು ಅವನು ವಾಲ್ಮೀಕಿಯ ಕಾವ್ಯಪ್ರೇರಕನಾಗಿ ರಾಮಾಯಣದ ಕಥೆ ಬರೆಯಲು ಸೂತ್ರಧಾರನಾಗಿ ಮುಖ್ಯಪಾತ್ರ ವಹಿಸುವ ವೈಶಿಷ್ಟ್ಯ. ಪೂರ್ವಾಭಿಪ್ರಾಯ ನಿರ್ಮಿತ ಪಾತ್ರಗಳನ್ನು ಮುರಿದು ಕಟ್ಟುವ ಕೆಲಸದಲ್ಲಿ ನಾಟಕಕಾರ ಎಸ್.ವಿ. ಕೃಷ್ಣಶರ್ಮ ಅವರ ಚಿಂತನಾಕ್ರಮ ಮನವರಿಕೆ ಮಾಡಿಕೊಡುವುದರಲ್ಲಿ ಯಶಸ್ಸು ಕಂಡಿದೆ. ಸ್ತ್ರೀವಾದೀ ನೆಲೆಯಲ್ಲಿ ರಾಮನೊಡನೆ ವಾಗ್ವಾದಕ್ಕಿಳಿಯುವ, ಸ್ತ್ರೀ ಶೋಷಣೆಯ ವಿರುದ್ಧ ಬಂಡೇಳುವ ಮಂಡೋದರಿಯ ಚಿಂತನಶೀಲ ಮಾತುಗಳು ಮತ್ತೆ ಮತ್ತೆ ಮೆಲುಕು ಹಾಕುವಂತಿದ್ದವು. ಅಂತಿಮ ದೃಶ್ಯದಲ್ಲಿ, ಪೌಲಸ್ತ್ಯ, ರಾಮನ ಕೈಯಲ್ಲಿ ಯುದ್ಧಕಂಕಣ ಕಟ್ಟಿಸಿಕೊಂಡು ಕೃತಕೃತ್ಯ ಭಾವದಿಂದ ನಿರ್ಗಮಿಸುವ ದೃಶ್ಯ ನೋಡುಗರ ಹೃದಯವನ್ನು ಭಾರವಾಗಿಸುತ್ತದೆ.
ಸಂತೃಪ್ತ ಭಾವ ತಂದ ನಾಟಕ ಎಲ್ಲ ಅಂಶಗಳಲ್ಲೂ ಪರಿಪೂರ್ಣತೆ ತೋರಿತು. ದೃಶ್ಯ-ಪಾತ್ರಗಳು ಒಂದರೊಳಗೊಂದು ಹೆಣೆದುಕೊಂಡ ರಂಗತಂತ್ರ ಜಾಣ್ಮೆಯಿಂದ ಕೂಡಿತ್ತು. ರಾವಣನಾಗಿ ಕೃಷ್ಣ ಶರ್ಮರ ಪಕ್ವಾಭಿನಯ, ಚೈತನ್ಯ ಮೆಚ್ಚುಗೆ ತರುತ್ತದೆ. ಹರಿತ ನಿರ್ದೇಶನದಲ್ಲಿ ಶರ್ಮ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ್ದಾರೆ. ವಾಲ್ಮೀಕಿ -ರಂಗನಾಥರಾವ್, ಮಾರೀಚ-ಪ್ರದೀಪ್ ಅಂಚೆ ಅವರ ಅಭಿನಯ ಗಮನ ಸೆಳೆಯುತ್ತದೆ. ಸ್ತ್ರೀಪಾತ್ರಗಳಲ್ಲಿ ರಾಧಿಕಾ ಭಾರಧ್ವಾಜ್, ಪಲ್ಗುಣಿ ,ಕಾವ್ಯ ಚಂದ್ರಶೇಖರ್ ಚೆನ್ನಾಗಿ ನಟಿಸಿದ್ದಾರೆ. ಉಳಿದ ಪಾತ್ರಗಳಲ್ಲಿ ಬಿ. ಅಶೋಕ್, ವರುಣ್ , ಕುಲದೀಪ್ ಸೋಮಯಾಜಿ,ಮಧುಸೂದನ್ ಮತ್ತು ಮಧುಕರ್ , ಮುಂತಾದವರ ಅಭಿನಯ ಮನಸ್ಸನ್ನು ಗೆದ್ದಿತ್ತು. . ಪದ್ಮಚರಣರ ಮನೋಜ್ಞ ಸಂಗೀತ ಸಂಯೋಜನೆ, ವಿದ್ವಾನ್ ಎಸ್. ಶಂಕರ್ ಗಾಯನ ಕರ್ಣಾನಂದಕರವಾಗಿತ್ತು.
*************** ವೆಂಕಟೇಶ ಪ್ರಸಾದ್

Leave a Comment