ಅನಗತ್ಯ ಓಡಾಟ ತಡೆಗೆ ಬ್ಯಾರಿಕೇಡ್

 

ಕಲಬುರಗಿ,ಏ.7-ಜನ ರಸ್ತೆಯ ಮೇಲೆ ಅನಗತ್ಯವಾಗಿ ಓಡಾಡುವುದನ್ನು ತಡೆಯಲು ಸಂಚಾರಿ ಪೊಲೀಸರು ದಿನಕ್ಕೊಂದು ತಂತ್ರ ಬಳಸುತ್ತಿದ್ದಾರೆ. ಅನಗತ್ಯ ಓಡಾಟ ತಡೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಅಗತ್ಯ ಮತ್ತು ತುರ್ತು ಕೆಲಸ ಹೊರತುಪಡಿಸಿ ಅನಗತ್ಯವಾಗಿ ಓಡಾಡುವವರನ್ನು ಹಿಡಿದು ವಿಚಾರಣೆ ನಡೆಸಲಾಗುತ್ತಿದೆ. ಸುಖಾಸುಮ್ಮನೆ ಓಡಾಡುವವರನ್ನು ಹಿಡಿದು ಬುದ್ಧಿವಾದ ಹೇಳಿ ಮನೆಗೆ ಕಳುಹಿಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಲಾಕ್ ಡೌನ್ ನಿಯಮ ಉಲ್ಲಂಘಿಸದಂತೆ ಸೂಚನೆ ನೀಡಲಾಗುತ್ತಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಜಾರಿ ಮಾಡಿದ್ದರೂ ಜನ ಅನಗತ್ಯವಾಗಿ ರಸ್ತೆ ಮೇಲೆ ಓಡಾಡುತ್ತಿರುವುದು ಮಾತ್ರ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಅನಗತ್ಯವಾಗಿ ಓಡಾಡುವ ಬೈಕ್ ಸವಾರರಿಗೆ ಬೆತ್ತದ ರುಚಿ, ಕಸಗುಡಿಸುವ ಶಿಕ್ಷೆ, ರಸ್ತೆ ಮೇಲೆ ಯೋಗ ಮಾಡುವ ಶಿಕ್ಷೆ, ಬೈಕ್ ಜಪ್ತಿಯಂತಹ ಶಿಕ್ಷೆಯ ಅನೇಕ ಪ್ರಯೋಗಗಳನ್ನು ನಡೆಸಿ ಪೊಲೀಸರು ಹೈರಾಣಾಗಿದ್ದಾರೆ. ಇಷ್ಟಾದರೂ ಜನ ಯಾಕೆ ಓಡಾಡುವುದನ್ನು ನಿಲ್ಲಿಸುತ್ತಿಲ್ಲ ಎಂಬುವುದೇ ಪೊಲೀಸರಿಗೆ ಚಿಂತೆಯಾಗಿದೆ. ಸುಖಾಸುಮ್ಮನೆ ಓಡಾಡುವುದನ್ನು ನಿಲ್ಲಿಸುವುದರ ಮೂಲಕ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ, ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಪಾಲನೆ ಮಾಡುವುದರ ಮೂಲಕ ಕೊರೊನಾ ಸೋಂಕು ಹರಡದಂತೆ ತಡೆಯಲು ಪ್ರತಿಯೊಬ್ಬರು ಕೈಜೋಡಿಸಬೇಕಿದೆ.

Leave a Comment