ಅನಂತ ಕುಮಾರ್ ಹೆಗಡೆ ಹೇಳಿಕೆ ತಪ್ಪು.. ಅಂತಹದ್ದು ಏನು ನಡೆದಿಲ್ಲ.. ಬೇಕಿದ್ದರೆ ತನಿಖೆ ನಡೆಸಬಹುದು; ಫಡ್ನವೀಸ್

ಬೆಂಗಳೂರು, ಡಿ 2 – ಮಹಾರಾಷ್ಟ್ರ ರಾಜಕಾರಣದಲ್ಲಿ ನಡೆದ ಅನಿರೀಕ್ಷಿತ ಪರಿಣಾಮಗಳ ಬಗ್ಗೆ ಕಾರವಾರ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ನೀಡಿರುವ ಹೇಳಿಕೆ ಬಿಜೆಪಿ ವಲಯದಲ್ಲಿ ವಿವಾದ ಸೃಷ್ಟಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ತರಾತುರಿಯಲ್ಲಿ ಪ್ರಮಾಣವಚನ ಸ್ವೀಕರಿಸಿ, ಕೇವಲ 80 ಗಂಟೆಗಳ ನಂತರ ರಾಜೀನಾಮೆ ನೀಡಿದ ಕ್ರಮದ ಹಿಂದೆ ದೊಡ್ಡ ನಾಟಕವಿದೆ ಎಂದು ಅನಂತಕುಮಾರ ಹೆಗಡೆ ಬಹಿರಂಗಪಡಿಸಿದ್ದರು.
ಮಹಾರಾಷ್ಟ್ರ ಸರ್ಕಾರದ ಖಜಾನೆಯಲ್ಲಿ 40 ಸಾವಿರ ಕೋಟಿ ರೂಪಾಯಿ ಕೇಂದ್ರ ಸರ್ಕಾರದ ಹಣವನ್ನು ಕಾಪಾಡಿ.. ಅದನ್ನು ಮತ್ತೆ ಕೇಂದ್ರ ಸರ್ಕಾರಕ್ಕೆ ವಾಪಸ್ಸು ಕಳುಹಿಸಲು ಫಡ್ನವೀಸ್ ಬುಮತವಿಲ್ಲದಿದ್ದರೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 80 ಗಂಟೆಗಳ ನಂತರ ರಾಜೀನಾಮೆ ನೀಡಿದರು ಎಂದು ಹೇಳಿದ್ದಾರೆ.
ಸದಾ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಸಂಸದ ಅನಂತಕುಮಾರ ಹೆಗಡೆ, ಯಲ್ಲಾಪುರ ಉಪ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇವೇಂದ್ರ ಫಡ್ನವೀಸ್ ಅವರಿಗೆ ಕೇಂದ್ರದ ಹಣವನ್ನು ಸುರಕ್ಷಿತವಾಗಿ ಕೇಂದ್ರಕ್ಕೇ ಹಿಂತಿರುಗಿಸಲು ೧೫ ಗಂಟೆಗಳ ಸಮಯ ವಿನಿಯೋಗಿಸಿದ್ದಾರೆ ಎಂದರು,
ಮಹಾರಾಷ್ಟ್ರದಲ್ಲಿ ನಮ್ಮ ಪಕ್ಷದ ವ್ಯಕ್ತಿ ಕೇವಲ 80 ಗಂಟೆಗಳ ಕಾಲ ಮುಖ್ಯಮಂತ್ರಿಯಾಗಿದ್ದರು ಎಂದು ನಿಮಗೆಲ್ಲರಿಗೂ ಗೊತ್ತಿದೆ. ನಂತರ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದರು. ನಾವು ಯಾಕೆ ನಾಟಕ ಮಾಡಬೇಕಾಯಿತು? ಬಹುಮತ ಇಲ್ಲ ಎಂಬುದು ನಮಗೆ ಗೊತ್ತಿರಲಿಲ್ಲವೇ?. ಬಹುಮತವಿಲ್ಲ ಎಂದು ನಮಗೆ ತಿಳಿದಿದ್ದರೂ .. ಅವರು ಏಕೆ ಮುಖ್ಯಮಂತ್ರಿ ಆದರು? ಎಂದು ಎಲ್ಲರೂ ಈ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಇದಕ್ಕೆ ಕಾರಣ 40 ಸಾವಿರ ಕೋಟಿರೂಪಾಯಿ, ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಈ 40 ಸಾವಿರ ಕೋಟಿಗಳನ್ನು ಅಭಿವೃದ್ಧಿ ಉದ್ದೇಶಗಳಿಗಲ್ಲದೆ ಅನ್ಯ ಉದ್ದೇಶಗಳಿಗೆ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದ್ದ ಕಾರಣ, ಹಣವನ್ನು ರಕ್ಷಿಸಲು ಪಕ್ಕಾ ಯೋಜನೆ ರೂಪಿಸಿ, ದೊಡ್ಡ ನಾಟಕ ಆಡಲಾಯಿತು. ಅದರ ಭಾಗವಾಗಿ ಅವರು ಮುಖ್ಯಮಂತ್ರಿಯಾದರು. 15ಗಂಟೆಗಳಲ್ಲಿ, ಹಣವನ್ನು ಸುರಕ್ಷಿತವಾಗಿ ಕೇಂದ್ರ ಸರ್ಕಾರಕ್ಕೆ ವಾಪಸ್ಸು ಕಳುಹಿಸಿದರು ಎಂದರು.

40 ಸಾವಿರ ಕೋಟಿ ರೂಪಾಯಿ ಹಣ ರಾಜ್ಯದ ಖಜಾನೆಯಲ್ಲಿದ್ದರೆ ಮುಂಬರುವ ಮುಖ್ಯಮಂತ್ರಿ ಏನು ಮಾಡುತ್ತಾರೆ ಎಂಬುದರ ಬಗ್ಗೆ ನಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ ಎಂದು ಅನಂತ್‌ಕುಮಾರ್ ಹೇಳಿದರು. ಆದರೆ , ಅವರ ಹೇಳಿಕೆ ಇತ್ತ ಬಿಜೆಪಿ ಅತ್ತ ಫಡ್ನವೀಸ್ ಅವರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಈ ಬಗ್ಗೆ ಮುಂಬೈನಲ್ಲಿ ಪ್ರತಿಕ್ರಿಯಿಸಿರುವ ದೇವೇಂದ್ರ ಫಡ್ನವೀಸ್, ಅಂತಹದ್ದು ಏನು ನಡೆದಿಲ್ಲ ನಾನು ಎರಡನೇ ಬಾರಿಗೆ ಮುಖ್ಯಮಂತ್ರಿಆಗಿದ್ದಾಗ ಯಾವುದೇ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. ಅನಂತಕುಮಾರ ಹೆಗಡೆ ಹೇಳಿಕೆ ಸಂಪೂರ್ಣ ತಪ್ಪು. ಇಂತಹದು ನಡೆಯಲು ಯಾವುದೇ ಅವಕಾಶವಿಲ್ಲ. ಸರ್ಕಾರದ ಹಣಕಾಸು ಇಲಾಖೆ ಬೇಕಾದರೆ, ಈ ಬಗ್ಗೆ ತನಿಖೆ ನಡೆಸಬಹುದು ಎಂದು ಫಡ್ನವೀಸ್ ಹೇಳಿದ್ದಾರೆ.

Leave a Comment