ಅನಂತ ಕುಮಾರ್ ಹೆಗಡೆಗೆ ಉಚ್ಚಾಟನೆಗೆ ಡಿ.ಬಸವರಾಜ್ ಆಗ್ರಹ

ದಾವಣಗೆರೆ.ಫೆ.7; ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‍ಷಾರವರಿಗೆ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ, ಗಾಂಧೀಜಿಯವರ ಸ್ವತಂತ್ರ್ಯ ಹೋರಾಟದ ಬಗ್ಗೆ ಬ್ರಿಟಿಷರೊಡನೆ ಒಳಪ್ಪಂದದ ಹೋರಾಟ ಎಂದು ಅವಹೇಳನಕಾರಿ ಹೇಳಿಕೆ ನೀಡಿದ ಸಂಸದ ಅನಂತ ಕುಮಾರ್ ಹೆಗಡೆಯವರನ್ನು ಬಿಜೆಪಿಯಿಂದ ಶಾಶ್ವತವಾಗಿ ಉಚ್ಚಾಟಿಸುವ ಮೂಲಕ ಗಾಂಧಿಯವರ ಬಗ್ಗೆ ಬಿಜೆಪಿಗೆ ಇರುವ ಗೌರವವನ್ನು ದೇಶದ ಮುಂದೆ ತೋರಿಸಲಿ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಡಿ.ಬಸವರಾಜ್ ಆಗ್ರಹಿಸಿದರು.
ಅವರಿಂದು ದಾವಣಗೆರೆ ನಗರದ ನರಸರಾಜ ರಸ್ತೆಯಲ್ಲಿರುವ ಇಮಾಮ್ ಅಹ್ಮದ್ ರಜಾ ಉದ್ಯಾನವನದಲ್ಲಿ ನಾವು ಭಾರತೀಯರು ಎಂಬ ಘೋಷಣೆಯೊಂದಿಗೆ ಪ್ರಗತಿ ಪರ ಸಂಘಟನೆಗಳ ನೇತೃತ್ವದಲ್ಲಿ ಸಿಎಎ, ಎನ್‍ಆರ್‍ಸಿ ಮತ್ತು ಎನ್‍ಪಿಆರ್ ವಿರೋಧಿಸಿ ಶಾಹಿನ್‍ಬಾಗ್ ಬೆಂಬಲಿಸಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬೀದರ್‍ನ ಶಾಲೆಯಲ್ಲಿ ಸಿಎಎ ಬಗ್ಗೆ ಪ್ರದರ್ಶಿಸಿದ ನಾಟಕವೊಂದರಲ್ಲಿ 9 ವರ್ಷದ ಮಗುವೊಂದು ಆಡಿದ ಮಾತು ಆ ಮಗುವಿನ ತಾಯಿ ಹಾಗೂ ಶಿಕ್ಷಕಿಯನ್ನು ದೇಶ ದ್ರೋಹದ ಆರೋಪದಡಿಯಲ್ಲಿ ಜೈಲಿಗೆ ಕಳುಹಿಸಲಾಗಿದೆ. ಆದರೆ ಸಿಎಎ ಪ್ರತಿಭಟನಾಕಾರರಿಗೆ ಗುಂಡಿಕ್ಕಲು ಕರೆ ನೀಡಿದ ಬಿಜೆಪಿ ಸಂಸದ ಅನುರಾಗ್‍ಠಾಕೂರ್, ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶ ಪ್ರೇಮಿ ಎಂದಿದ್ದ ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳದ ಮೋದಿ ಸರ್ಕಾರದ ನಡೆಯನ್ನು ಅವರು ತೀವ್ರವಾಗಿ ಖಂಡಿಸಿದರು. ನಾವು ಭಾರತೀಯರು ಸಂಘಟನೆಯ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಲ್ಲಾವಲಿ ಘಾಜಿಖಾನ್, ನಾವು ಭಾರತೀಯರು ಸಂಘಟನೆಯ ಮುಖಂಡರುಗಳಾದ ಜಬೀನಾ ಅಫಾ, ಟಿ. ಅಜ್ಗರ್, ಕರಿಬಸಪ್ಪ, ಅಬ್ದುಲ್‍ಘನಿ, ಇಮ್ರಾನ್ ರಜಾ, ಗುರುಮೂರ್ತಿ, ಜಬಿನಾಖಾಯಂ, ಮಹ್ಮದ್ ಸಾಜೀದ್, ಜಬೀನಾಬಾನು, ಹೀನಾ, ಷಕಿರಾ, ಸಬ್ರಿನ್, ಸತೀಶ್, ಮಹ್ಮದ್ ನಜೀರ್ ಇತರರು ಹಾಜರಿದ್ದರು. ಸಹಸ್ರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Comment