ಅನಂತ್‌ನಾಗ್‌ ನಲ್ಲಿ ಹಿಜ್ಬುಲ್‍ ಮುಜಾಹಿದ್ದೀನ್‍ ನ ಹಿರಿಯ ಕಮಾಂಡರ್ ಸೇರಿ ಮೂವರು ಉಗ್ರರು ಹತ

ಶ್ರೀನಗರ, ಜೂನ್ 29 -ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಅನಂತ್‌ನಾಗ್‌ನಲ್ಲಿ ಭದ್ರತಾ ಪಡೆಗಳು ಸೋಮವಾರ ನಡೆಸಿದ ತೀವ್ರ ಶೋಧ ಕಾರ್ಯಾಚರಣೆ (ಸಿಎಎಸ್‌ಒ) ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್‍ ಮುಜಾಹಿದ್ದೀನ್‍ ನ ಹಿರಿಯ ಕಮಾಂಡರ್ ಹಾಗೂ ಲಷ್ಕರ್ –ಎ-ತೊಯ್ಬಾ ಸಂಘಟನೆಯ ಇಬ್ಬರು ಸೇರಿ ಮೂವರು ಉಗ್ರರು ಹತರಾಗಿದ್ದಾರೆ.
ಇದರೊಂದಿಗೆ, ಕಾಶ್ಮೀರ ಕಣಿವೆಯಲ್ಲಿ ಕಳೆದ ಆರು ತಿಂಗಳಲ್ಲಿ ನಡೆದ ವಿವಿದ ಕಾರ್ಯಾಚರಣೆಗಳಲ್ಲಿ 116 ಉಗ್ರರು ಹತ್ಯೆಯಾಗಿದ್ದಾರೆ. ಈ ಮಧ್ಯೆ, ಭದ್ರತಾ ಕಾರಣಗಳಿಗಾಗಿ ಅನಂತ್‍ನಾಗ್‍ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಉಗ್ರರು ಅಡಗಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ಆಧರಿಸಿ, ಸೇನೆ, ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಅನಂತ್‌ನಾಗ್‌ನ ರೂನಿಪೋರಾದಲ್ಲಿ ಸೋಮವಾರ ಮುಂಜಾನೆ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ರಾಜೇಶ್ ಕಲಿಯಾ ಯುಎನ್‌ಐಗೆ ತಿಳಿಸಿದ್ದಾರೆ.
ಭದ್ರತಾ ಪಡೆಗಳು ಒಂದು ನಿರ್ದಿಷ್ಟ ಪ್ರದೇಶದೆಡೆಗೆ ಸಾಗುತ್ತಿದ್ದಾಗ ಅಡಗಿದ್ದ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಭಾರೀ ಗುಂಡಿನ ಚಕಮಕಿ ನಡೆದಿದೆ. ಘರ್ಷಣೆಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಘಟನಾ ಸ್ಥಳದಿಂದ ಒಂದು ಎಕೆ -47 ರೈಫಲ್ ಮತ್ತು ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಉಗ್ರರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚಿನ ವರದಿ ಬಂದಾಗ ಕಾರ್ಯಾಚರಣೆ ಮುಂದುವರೆದಿದೆ.
ಈ ಪ್ರದೇಶದಲ್ಲಿ ಯಾವುದೇ ಪ್ರತಿಭಟನೆಗಳನ್ನು ತಡೆಯಲು ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹತರಾದ ಉಗ್ರರ ಪೈಕಿ ಒಬ್ಬನನ್ನು ಜಮ್ಮು ಪ್ರದೇಶದ ದೋಡಾ ಜಿಲ್ಲೆಯಲ್ಲಿ ಬದುಕುಳಿದಿರುವ ಏಕೈಕ ಉಗ್ರ ಹಿಜ್ಬುಲ್‍ ಮುಜಾಹಿದ್ದೀನ್‍ ಸಂಘಟನೆಯ ಕಮಾಂಡರ್ ಮಸೂದ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ . ಜಮ್ಮು ವಲಯದ ದೋಡಾದಲ್ಲಿ ಉಗ್ರ ಹತನಾಗುವುದರೊಂದಿಗೆ ಜಿಲ್ಲೆ ಮತ್ತೆ ಭಯೋತ್ಪಾದಕರ ಮುಕ್ತವಾಗಿದೆ ಎಂದು ಅವರು ಹೇಳಿದ್ದಾರೆ.
ಮಸೂದ್ ದೋಡಾದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದು, ಅಂದಿನಿಂದ ತಲೆಮರೆಸಿಕೊಂಡಿದ್ದ. ಹಿಜ್ಬುಲ್‍ ಮುಜಾಹಿದ್ದೀನ್‍ ಸಂಘಟನೆಗೆ ಸೇರಿ ಕಾರ್ಯಾಚರಣೆಯ ಪ್ರದೇಶವನ್ನು ಕಾಶ್ಮೀರಕ್ಕೆ ಸ್ಥಳಾಂತರಿಸಿದ್ದ ಎಂದು ಅವರು ಹೇಳಿದ್ದಾರೆ.

Share

Leave a Comment