ಅಧಿವೇಶನ ಸುಸೂತ್ರ ಪ್ರಧಾನಿ ವಿಶ್ವಾಸ

ನವದೆಹಲಿ, ಜು. ೧೭ – ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಆಗಸ್ಟ್ 11ರ ವರೆಗೆ ನಡೆಯಲಿದೆ.

ಅಧಿವೇಶನದ ಆರಂಭದ ದಿನವಾದ ಇಂದು ಸಂಸತ್‌ನ ಉಭಯ ಸದನಗಳಲ್ಲಿ ಇತ್ತೀಚೆಗೆ ನಮ್ಮನಗಲಿದ ನಾಯಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.  ಇತ್ತೀಚೆಗೆ ಅಗಲಿದ ವಿನೋದ್ ಖನ್ನಾ, ಅನಿಲ್ ದವೆ, ಪಲ್ವೈ ಗೋವರ್ಧನ ರೆಡ್ಡಿ ಅವರಿಗೆ ಸಂತಾಪ ಸೂಚಿಸಿದ ನಂತರ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಒಟ್ಟು 19 ದಿನಗಳ ಕಾಲ ನಡೆಯಲಿರುವ ಸಂಸತ್‌ನಲ್ಲಿ ಭ್ರಷ್ಟಾಚಾರ ನಿಯಂತ್ರಣ ತಿದ್ದುಪಡಿ ವಿಧೇಯಕ, ಪೌರತ್ವ ಮಸೂದೆ ಸೇರಿದಂತೆ ಹಲವು ಪ್ರಮುಖ ಮಸೂದೆಗಳಿಗೆ ಅಂಗೀಕಾರ ಪಡೆಯಲು ಸರ್ಕಾರ ಮುಂದಾಗಿದೆ.

ಈ ನಡುವೆ ಕಾಶ್ಮೀರದಲ್ಲಿನ ಅಶಾಂತಿ, ಹಿಂಸಾಚಾರ, ಚೀನಾ ಗಡಿ ಬಿಕ್ಕಟ್ಟು, ಜಿಎಸ್‌ಟಿ ಜಾರಿ, ಸಾಲ ಮನ್ನಾ ಒತ್ತಾಯಿಸಿ ದೇಶಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸರ್ವಸನ್ನದ್ಧವಾಗಿವೆ.

ಪ್ರಧಾನಿ ಆಶಯ

ಸಂಸತ್ ಅಧಿವೇಶನ ಸುಸೂತ್ರವಾಗಿ ನಡೆಯಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ನರೇಂದ್ರಮೋದಿ ವ್ಯಕ್ತಪಡಿಸಿದರು. ರಾಷ್ಟ್ರದ ಹಿತದೃಷ್ಟಿಯಿಂದ ಅಧಿವೇಶನ ಕಲಾಪಗಳಲ್ಲಿ ಅರ್ಥಪೂರ್ಣ ಚರ್ಚೆ ನಡೆಯಲಿದೆ ಎಂದು ಅವರು ಆಶಿಸಿದ್ದಾರೆ.

ಜಿಎಸ್‌ಟಿ ಜಾರಿ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತೋರಿದ ಒಗ್ಗಟ್ಟನ್ನು ಅಧಿವೇಶನದಲ್ಲೂ ಪ್ರದರ್ಶಿಸಲಿ ಎಂದು ಅವರು ಬಯಸಿದರು.  ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆ ಹಾಗೂ ‘ದೇಶ ಬಿಟ್ಟು ತೊಲಗಿ’ ಆಂಧೋಲನದ 75ನೇ ವರ್ಷಾಚರಣೆಗೆ ಅಧಿವೇಶನ ಸಾಕ್ಷಿಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  ಜಿಎಸ್‌ಟಿ ಜಾರಿ ಬಳಿಕ ದೇಶವು ಪ್ರಗತಿಯತ್ತ ಸಾಗುತ್ತಿದೆ ಎಂದು ಮೋದಿ ಹೇಳಿದರು.

ಜಿಎಸ್‌ಟಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ದೇಶದ ಅಭಿವೃದ್ಧಿ ವೇಗವನ್ನು ಹೆಚ್ಚಿಸುತ್ತಿದೆ. ಇದರಿಂದ ಭಾರತ ಅತಿವೇಗವಾಗಿ ಪ್ರಗತಿ ಸಾಧಿಸಲು ನೆರವಾಗುತ್ತಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Leave a Comment