ಅಧಿಕ ದರಕ್ಕೆ ತರಕಾರಿ : ಮಾರಾಟಗಾರರ ವಿರುದ್ಧ ಪ್ರಕರಣ ದಾಖಲೆಗೆ ಸೂಚನೆ

* ಕೊರೊನಾ ಸೋಂಕು ನಿಯಂತ್ರಣ : ಮುಖ್ಯ ರಸ್ತೆ ಸ್ವಚ್ಛ – ಮನೆ ಬಾಗಿಲಿಗೆ ದಿನಸು
ರಾಯಚೂರು.ಮಾ.26- ಕೊರೊನಾ ತಡೆಗೆ ದೇಶದ ಲಾಕ್ ಡೌನ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ತರಕಾರಿ ಮತ್ತಿತರ ಸಾರ್ವಜನಿಕರ ಅಗತ್ಯ ವಸ್ತುಗಳನ್ನು ನಿಗದಿತ ಬೆಲೆಗಿಂತ ಅಧಿಕ ಮೊತ್ತದಲ್ಲಿ ಮಾರಾಟಕ್ಕೆ ಯತ್ನಿಸುವವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ಕಟ್ಟುನಿಟ್ಟಿನ ಸೂಚನೆ ಜಾರಿಗೊಳಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪರಿಸ್ಥಿತಿ ಯಾವುದೇ ಕಾರಣಕ್ಕೂ ಅಧಿಕ ಲಾಭಕ್ಕಾಗಿ ಬಳಸಿಕೊಳ್ಳುವುದನ್ನು ಸಹಿಸುವುದಿಲ್ಲವೆಂದು ಕಟ್ಟೆಚ್ಚರ ನೀಡಿದ ಅವರು, ನಗರಸಭೆ ಆಯುಕ್ತರು ಒಂದೆರೆಡು ಸಲ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿ, ನಂತರ ಪೊಲೀಸ್ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ. ಈಗಾಗಲೇ ಎಲ್ಲೆಡೆ ಸಾರ್ವಜನಿಕರ ಅನುಕೂಲಕ್ಕಾಗಿ ಅನೇಕ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ 21 ದಿನಗಳ ಲಾಕ್ ಡೌನ್‌ನಿಂದ ಯಾವುದೇ ತೊಂದರೆಯಾಗದಂತೆ ಭಾರೀ ಎಚ್ಚರಿಕೆಯ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಸಕಾಲದಲ್ಲಿ ದೊರೆಯುವಂತೆ ಮಾಡಲು 20 ಕಡೆ ಮಾರಾಟ ಕೇಂದ್ರಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಕೆಲ ಆಯ್ದಾ ಕಿರಾಣಿ ಮತ್ತು ದಿನಸು ಮಾರಾಟ ಕೇಂದ್ರಗಳಿಗೆ ಜನರ ಮನೆ ಬಾಗಿಲಿಗೆ ಅಗತ್ಯ ದಿನಿಸು ಪೂರೈಸಲು ಸೂಚಿಸಲಾಗಿದೆ. ಆಶಾಪೂರು ರಸ್ತೆ, ರಾಜಾಮಾತಾ ಗುಡಿ, ಐಡಿಎಸ್ಎಂಟಿ ಲೇಔಟ್‌ನಿಂದ ಇಂದಿರಾ ನಗರ ಐಬಿ ರಸ್ತೆ, ಸ್ಟೇಷನ್ ಸರ್ಕಲ್ ಆಜಾದ್ ನಗರ, ಗೋಲ್ ಮಾರ್ಕೆಟ್, ನಿಜಲಿಂಗಪ್ಪ ಕಾಲೋನಿ, ಡ್ಯಾಡಿ ಕಾಲೋನಿ, ಸ್ಟೇಷನ್ ಏರಿಯಾ, ರಿಲಾಯನ್ಸ್ ಮಾರ್ಟ್, ದೇವರ ಕಾಲೋನಿ, ಅಂದ್ರೂನ್ ಕಿಲ್ಲಾ, ಜಾಕೀರ್ ಹುಸೇನ್ ಸರ್ಕಲ್, ಬೇರೂನ್ ಕಿಲ್ಲಾ, ನಗರೇಶ್ವರ ಗುಡಿ, ತಿಮ್ಮಾಪೂರು ಪೇಟೆ, ಎಲ್‌ವಿಡಿ ಕಾಲೇಜು, ವಾಸವಿ ನಗರ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕೃಷ್ಣದೇವರಾಯ ಲೇಔಟ್, ಬೋಳಮಾನದೊಡ್ಡಿ ರಸ್ತೆ, ಬ್ರೇಸ್ತವಾರ ಪೇಟೆ, ಸಿಯಾತಲಾಬ್, ಯರಮರಸ್, ಅಸ್ಕಿಹಾಳ ಸೇರಿದಂತೆ ಅನೇಕ ಕಡೆ ಕಿರಾಣಿ ಅಂಗಡಿಗಳನ್ನೇ ಸಾರ್ವಜನಿಕರ ವಿತರಣೆಗೆ ಬಳಸಲಾಗಿದೆ.
ಲಾಕ್ ಡೌನ್ 2ನೇ ದಿನ ಜನ ಅಗತ್ಯ ವಸ್ತುಗಳ ಪೂರೈಕೆಯ ಅಸ್ತವ್ಯಸ್ತತೆಯಿಂದ ತತ್ತರಿಸಿ ಹೋಗಿದ್ದರು. ಸಕಾಲಕ್ಕೆ ಅಗತ್ಯ ವಸ್ತುಗಳು ದೊರೆಯದಿರುವುದರಿಂದ ನೇರವಾಗಿ ಮಾರುಕಟ್ಟೆಗೆ ತೆರಳುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಸರ್ಕಾರದ ಉದ್ದೇಶವನ್ನೇ ತಲೆಕೆಳಗಾಗುವಂತೆ ಮಾಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ತಕ್ಷಣವೇ ಸಾರ್ವಜನಿಕರ ಅಗತ್ಯ ವಸ್ತುಗಳ ಪೂರೈಕೆಗಾಗಿ ಮತ್ತಷ್ಟು ಹೆಚ್ಚಿನ ಸೌಕರ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಅತ್ಯಂತ ಭಯಾನಕ ಕೊರೊನಾ ವಿರುದ್ಧ ಸಮರ್ಪಕವಾಗಿ ಕಾರ್ಯಾಚರಣೆಗಾಗಿ ಜನರನ್ನು ಮನೆಯಲ್ಲಿಯೇ ನಿರ್ಬಂಧಗೊಳ್ಳುವಂತೆ ಮಾಡಲು ಜಿಲ್ಲಾಡಳಿತ ಭಾರೀ ಪ್ರಯತ್ನ ಮುಂದುವರೆಸಿದೆ. ಆದರೆ, ಜನರಿಗೆ ತರಕಾರಿ, ಅಗತ್ಯ ವಸ್ತು ಸೇರಿದಂತೆ ಇನ್ನೂ ಹೆಚ್ಚುವರಿ ಮೂಲಭೂತ ಸೌಕರ್ಯ ದೊರೆಯದ ಕಾರಣ ಜನ ಒತ್ತಾಯಪೂರ್ವಕವಾಗಿ ಹೊರಗಡೆ ಬರುವಂತಹ ಪರಿಸ್ಥಿತಿ ಮುಂದುವರೆದಿದೆ.
ಇದನ್ನು ತಡೆಯಲು ಪೊಲೀಸ್ ಬಂದೋಬಸ್ತ್ ಮತ್ತಷ್ಟು ಬಿಗಿಗೊಳಿಸಿ, ಲಾಠಿ ಪ್ರಹಾರ ಮಾಡಲಾಗುತ್ತಿದೆ. 2ನೇ ದಿನಕ್ಕೆ ಜನರ ಪರಿಸ್ಥಿತಿ ಇದಾದರೇ, ಮುಂಬರುವ ದಿನಗಳಲ್ಲಿ ಮತ್ತೇನು ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ. ಸಾರ್ವಜನಿಕರಿಗೆ ಅಗತ್ಯ ವಸ್ತು ದೊರೆಯುವಂತೆ ಮಾಡುವ ಪ್ರಯತ್ನಕ್ಕೆ ಜಿಲ್ಲಾಡಳಿತ ಮುಂದಾಗಿರುವಾಗಲೇ ಮತ್ತೊಂದು ಕಡೆ ಕೊರೊನಾ ವೈರಸ್ ಸೋಂಕು ತಾಕದಂತೆ ಮುಖ್ಯರಸ್ತೆಗಳು ಹಾಗೂ ಬಡಾವಣೆಗಳಲ್ಲಿ ಫಾಗಿಂಗ್ ಮತ್ತು ಸ್ವಚ್ಛಗೊಳಿಸುವ ಕೆಲಸ ಬಿರುಸುಗೊಂಡಿದೆ.
ಅಗ್ನಿಶಾಮಕ ಇಲಾಖೆಯೊಂದಿಗೆ ನಗರಸಭೆ ಸಂಯುಕ್ತವಾಗಿ ವಿಶ್ವ ಆರೋಗ್ಯ ಸಂಘದ ಸೂಚನೆಯನ್ವಯ ವಿವಿಧ ರಸಾಯನಿಕ ಪದಾರ್ಥಗಳನ್ನು ಬಳಸಿ ಸ್ವಚ್ಛತಾ ಕಾರ್ಯ ಬಿರುಸುಗೊಳಿಸಲಾಗಿದೆ. ಕೊರೊನಾ ತಡೆಗೆ ಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಅತ್ಯಂತ ಕಟ್ಟುನಿಟ್ಟಾಗಿ ನಿರ್ವಹಿಸುತ್ತಿದೆ. ಅಂಗಡಿ ಮುಂಗಟ್ಟುಗಳಲ್ಲಿ ಏನೇ ಅಗತ್ಯ ಸಾಮಾನು ಖರೀದಿಗೆ ಜನ ಆಗಮಿಸಿದರೂ, ಪರಸ್ಪರರ ಮಧ್ಯೆ ಕನಿಷ್ಟ 1 ಮೀ. ಅಂತರ ಕಾಯ್ದುಕೊಳ್ಳುವ ರೀತಿಯಲ್ಲಿ ಸುಣ್ಣದಿಂದ ಮಾರ್ಕ್ ಮಾಡಲಾಗಿದೆ. ಸಾಮಾಜಿಕ ಅಂತರದಿಂದ ಕೊರೊನಾ ಅತ್ಯಂತ ಯಶಸ್ವಿಯಾಗಿ ನಿಯಂತ್ರಿಸಬಹುದೆಂಬ ಸೂಚನೆ ಹಿನ್ನೆಲೆ, ಜಿಲ್ಲಾಡಳಿತ ಇದಕ್ಕೆ ಅಗತ್ಯವಾದ ಎಲ್ಲಾ ಮುನ್ನೆಚ್ಚರಕಾ ಕ್ರಮ ಕೈಗೊಳ್ಳುತ್ತಿದೆ.

Leave a Comment