ಅಧಿಕಾರ ಹಂಚಿಕೆ ಪಕ್ಷಕ್ಕೆ ಒಳಿತು ಸಾಧ್ಯ: ಕೆ.ಎಚ್.ಮುನಿಯಪ್ಪ

ಬೆಂಗಳೂರು, ಜ. 21- ಪಕ್ಷದಲ್ಲಿ ಅಧಿಕಾರ ಹಂಚಿಕೆ ಮಾಡಿಕೊಂಡು ಕೆಲಸ ಮಾಡುವುದು ಆರೋಗ್ಯಕರವಾಗಿದೆ. ಸಾಕಷ್ಟು ಹಿರಿಯ ನಾಯಕರಿರುವುದರಿಂದ ಅಧಿಕಾರ ಹಂಚಿಕೆಯಾಗುವುದು ಒಳ್ಳೆಯದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಚ್.ಮುನಿಯಪ್ಪ, ಶಾಸಕಾಂಗ ಮತ್ತು ಪ್ರತಿಪಕ್ಷ ನಾಯಕ ಸ್ಥಾನ ಪ್ರತ್ಯೇಕ ವಿಚಾರವಾಗಿ ಪ್ರತಿಕ್ರಿಯಿಸಿ, ಮಹಾರಾಷ್ಟ್ರದಲ್ಲಿ ಇಂತದ್ದೊಂದು ಪ್ರಯತ್ನ ಮಾಡಿದ್ದೇವೆ. ಪಕ್ಷದಲ್ಲಿ ಹಲವು ಹಿರಿಯರಿದ್ದಾರೆ.
ಎರಡನ್ನೂ ಬೇರೆ ಮಾಡಿದರೆ ತಪ್ಪೇನಿಲ್ಲ‌.ಅಧಿಕಾರ ಹಂಚಿಕೆಯಾಗಬೇಕು‌.ಹಾಗಾದಾಗ ಮಾತ್ರವೇ ಪಕ್ಷ ಕಟ್ಟಲು ಸಾಧ್ಯ.ಇದೇ ಅಭಿಪ್ರಾಯವನ್ನು ವೇಣುಗೋಪಾಲ್ ಬಳಿ ವ್ತಕ್ತಪಡಿಸಿರುವುದಾಗಿ ಮುನಿಯಪ್ಪ ಸ್ಪಷ್ಟಪಡಿಸಿದರು.
ಸಮನ್ವಯ ಕಮಿಟಿ ಹಿಂದಿನಿಂದಲೂ ಇದೆ. ಮೂರು ತಿಂಗಳಿಗೊಮ್ಮೆ ಕೂತು ಚರ್ಚೆ ಮಾಡಿ ಪಕ್ಷ ಹೇಗೆ ನಡೆಯುತ್ತದೆ ಎಂದು ಚರ್ಚಿಸಬಹುದು. ಇದು ಹೊಸದೇನಲ್ಲ, ಮೊದಲಿನಿಂದಲೂ ಇದೆ. ಪಕ್ಷಕ್ಕೆ ಬಂದ ಮೇಲೆ ವಲಸಿಗ, ಮೂಲ ಎನ್ನುವ ತಾರತಮ್ಯ ಇರಬಾರದು. ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದು ಹದಿನಾಲ್ಕು ವರ್ಷಗಳಾಗಿವೆ. ಬಂದ ಸ್ವಲ್ಪ ಕಾಲದಲ್ಲಿಯೇ ಅವರಿಗೆ ಎಲ್ಲ ಜವಾಬ್ದಾರಿ ಕೊಡಲಾಗಿದೆ. ಕಳೆದ ನಲವತ್ತು ವರ್ಷಗಳಿಂದಲೂ ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ.ಪಾಟೀಲ್, ಬಿ.ಕೆ.ಹರಿಪ್ರಸಾದ್, ತಾವು ಸೇರಿದಂತೆ ಹಲವರು ಇದ್ದೇವೆ. ನಾವೆಲ್ಲ ಹಿರಿಯರಾಗಿದ್ದಾಗ್ಯೂ ಸಹ ಸಿದ್ದರಾಮಯ್ಯ ಅವರಿಗೆ ಉತ್ತಮ ಅವಕಾಶ ಕೊಟ್ಟಿದ್ದೇವೆ. ಹೊಸಬರು, ಹಳಬರು ಎಂಬ ಭೇದಭಾವ ಬರಬಾರದು‌. ಕಾಂಗ್ರೆಸ್‌ನಲ್ಲಿಯೂ ಟಾಲರೆನ್ಸ್ ಇದೆ. ಹೊಸಬರು, ಹಳಬರು ಎಂದು ಅವಕಾಶ ಕೊಟ್ಟಿಲ್ಲ. ಪಕ್ಷದಲ್ಲಿ ಶಿಸ್ತಿನಿಂದ ಇರುವವರೂ ಇದ್ದಾರೆ. ಅಧಿಕಾರ ಇಲ್ಲದಿದ್ದರೂ ಅವರೆಂದೂ ಪಕ್ಷ ಬಿಟ್ಟು ಹೋಗಿಲ್ಲ. ಎಲ್ಲರೂ ಸರಿಯಾಗಿ ನಡೆದುಕೊಂಡರೆ ಈ ಅಸಮಾಧಾನ ಬರುವುದಿಲ್ಲ ಎಂದರು.
ಅಧಿಕಾರ ಹಂಚಿಕೆ ಆಗುವುದರಿಂದ ಎಲ್ಲಾ ಹಿರಿಯರಿಗೂ ಅವಕಾಶ ಕೊಡಲು ಸಾಧ್ಯವಾಗದಿದ್ದರೂ ಅಧಿಕಾರ ಹಂಚಿಕೆಯಿಂದ ಕೆಲವರಿಗಾದರೂ ಅವಕಾಶ ಸಿಗಲಿದೆ. ಆದಷ್ಟು ಬೇಗ ಎಲ್ಲಾ ಗೊಂದಲಗಳನ್ನು ಉಸ್ತುವಾರು ವೇಣುಗೋಪಾಲ್ ಅವರು ಬಗೆಹರಿಸಬೇಕು. ತಡವಾದಷ್ಟು ಗೊಂದಲಗಳು ಹೆಚ್ಚಾಗುತ್ತಿವೆ ಎಂದರು.
ಕೆಪಿಸಿಸಿ ಅಧ್ಯಕ್ಷ ನೇಮಕಾತಿ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ಹಿತ ದೃಷ್ಟಿಯಿಂದ ಆದಷ್ಟು ಬೇಗ ಅಧ್ಯಕ್ಷರ ನೇಮಕವಾಗಬೇಕು. ಅಧ್ಯಕ್ಷರ ಆಯ್ಕೆ ಸಂಬಂಧ ರಾಜ್ಯಕ್ಕೆ ಹೈಕಮಾಂಡ್ ವೀಕ್ಷಕರನ್ನು ಕಳಿಸಿತ್ತು. ವೀಕ್ಷಕರು ಎಲ್ಲಾ ಕಾಂಗ್ರೆಸ್ ನಾಯಕರಿಂದ ಸಂಗ್ರಹಿಸಿದ ಅಭಿಪ್ರಾಯವನ್ನು ಎಐಸಿಸಿ ನಾಯಕರಿಗೆ ಸಲ್ಲಿಸಿದ್ದಾರೆ. ಅದರ ಆಧಾರದ ಮೇಲೆ ಹೈಕಮಾಂಡ್ ಅಧ್ಯಕ್ಷರನ್ನು ನಿರ್ಧಾರ ಮಾಡಲಿದೆ. ಹೈಕಮಾಂಡ್ ಆಯ್ಕೆಯನ್ನು ನಾವು ಒಪ್ಪಿಕೊಂಡು ಕೆಲಸ ಮಾಡುತ್ತೇವೆ ಎಂದರು.
ದೆಹಲಿ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಬಿಝಿಯಾಗಿದ್ದರು. ಬಹುಶಃ ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ವಿಳಂಬ ಆಗಿರಬಹುದು ಎಂದು ಕಾರಣ ನೀಡಿದರು.

ಕಾರ್ಯಾಧ್ಯಕ್ಷ ಹುದ್ದೆ ಎನ್ನುವುದು ಸಾಮಾನ್ಯವಾಗಿ ಒಂದು, ಎರಡು ಇರುತ್ತದೆ. ಈಗಲೂ ಒಬ್ಬರೆ ಕಾರ್ಯಾಧ್ಯಕ್ಷರು ಇದ್ದಾರೆ. ಪಕ್ಷಕ್ಕೆ ಅಧ್ಯಕ್ಷರು ಮುಖ್ಯ. ಅಧ್ಯಕ್ಷರಿಗೆ ನೆರವಾಗಲಿ ಎಂಬ ಕಾರಣಕ್ಕಾಗಿ ಕಾರ್ಯಾಧ್ಯಕ್ಷರ ನೇಮಕ ಮಾಡಲಾಗುತ್ತದೆ. ಒಂದು, ಎರಡು ಕಾರ್ಯಾಧ್ಯಕ್ಷ ಹುದ್ದೆಗೆ ನೇಮಕಕ್ಕೆ ನಮ್ಮ ಅಭ್ಯಂತರ ಇಲ್ಲ. ನಾಲ್ಕೈದು ಕಾರ್ಯಾಧ್ಯಕ್ಷರ ನೇಮಕ ಮಾಡಿ ಎಂದು ಸಿದ್ದರಾಮಯ್ಯ ಹೇಳಿದ್ದರೆ, ಅದು ಅವರ ಅಭಿಪ್ರಾಯ ಎಂದರು‌.

Leave a Comment