ಅಧಿಕಾರ ಹಂಚಿಕೆಯಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ; ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ,ಜೂ 17- ಮೈತ್ರಿ ಸರ್ಕಾರದಲ್ಲಿ ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಜೊತೆಗೆ ಅಧಿಕಾರ ಹಂಚಿಕೆಯಲ್ಲೂ ನಿರ್ಲಕ್ಷ್ಯಿಸಿದೆ ಎಂದು ಜೆಡಿಎಸ್ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಮತ್ತೊಮ್ಮೆ ಆಕ್ರೋಷ  ವ್ಯಕ್ತ ಪಡಿಸಿದ್ದಾರೆ.

  ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ.ಈ ಭಾಗಕ್ಕೆ ಪ್ರಾತಿನಿಧ್ಯ ಕೊಡುವ ಪದ್ಧತಿಯನ್ನು ಮುಖ್ಯಮಂತ್ರಿ ಅವರು ಕೈ ಬಿಟ್ಟಿದ್ದಾರೆ ಎನ್ನುವ ಮೂಲಕ ಜೆಡಿಎಸ್ ನಿಂದಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕಕ್ಕೆ ಕೆಲವು ಕಚೇರಿಗಳನ್ನು ಸ್ಥಳಾಂತರ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಅವರು ನೀಡಿದ ಮಾತು ಒಂದೂ ಈಡೇರಿಲ್ಲ.ಇಲ್ಲಿಯವರೆಗೂ ಒಂದೇ ಒಂದು ಕಚೇರಿಯನ್ನು ಉತ್ತರ ಕರ್ನಾಟಕದತ್ತ ಮುಖ ಮಾಡಿಲ್ಲ.ಹೀಗಾಗಿ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ತೀರ್ಮಾನಕ್ಕೆ ಬರಬೇಕಾಗಿದೆ ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು.

  ಕಾಂಗ್ರೆಸ್ –ಜೆಡಿಎಸ್ ಪಕ್ಷದಲ್ಲಿ ತಮ್ಮನ್ನು ಮಂತ್ರಿ ಮಾಡಿಲ್ಲ, ನಿಮ್ಮನ್ನು ಮಂತ್ರಿ ಮಾಡಲಿಲ್ಲ ಎಂಬುದಕ್ಕಾಗಿಯೇ ಕಿತ್ತಾಟ ನಡೆಯುತ್ತಿದೆ.ಅದಕ್ಕಾಗಿಯೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದು ಕರ್ನಾಟಕ ಅಂದ್ರೆ ಕೇವಲ ಬೆಂಗಳೂರು ಹಾಗೂ ಮೈಸೂರು ಅಲ್ಲ. ಉತ್ತರ ಕರ್ನಾಟಕದ ಕಡೆಗೂ ಗಮನ ಹರಿಸಿ ಎಂದು ಎಚ್ಚರಿಕೆ ನೀಢಿದ್ದೇನೆ ಎಂದು ಅವರು ತಿಳಿಸಿದರು.

  ಉತ್ತರಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಬೇಡಿಕೆ ಪರಿಹಾರವಲ್ಲ ಎಂದು ಬಸವರಾಜ ಹೊರಟ್ಟಿ, ಪ್ರತ್ಯೇಕ ರಾಜ್ಯದ ಗೊಡವೆಯೇ ನಮಗೆ ಬೇಡ. ಉತ್ತರ ಕರ್ನಾಟಕದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಒಟ್ಟು 90 ಶಾಸಕರು ಆಯ್ಕೆಯಾಗಿದ್ದಾರೆ, ಎಂ ಬಿ ಪಾಟೀಲ್ ವರಿಗೆ ಗೃಹ ಖಾತೆ ಹೊರತು ಪಡಿಸಿದರೆ  ಉತ್ತರ ಕರ್ನಾಟಕ ಭಾಗದ ಶಾಸಕರಿಗೆ  ಮಹತ್ವದ ಖಾತೆ ನೀಡಿಲ್ಲ,ವಿಧಾನ ಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಗದಗ ಮತ್ತು ಧಾರವಾಡ , ಕೊಪ್ಪಳ ಜಿಲ್ಲೆಗಳಿಗೆ ಪ್ರತಿನಿಧಿಗಳಿಲ್ಲ ಎಂದು ಸಚಿವ ಸ್ಥಾನ ಹಂಚಿಕೆಯಲ್ಲಿನ ತಾರತಮ್ಯವನ್ನು ಅವರು ಖಂಡಿಸಿದರು.

  ಉತ್ತರ ಕರ್ನಾಟಕದ ಭಾಗದ ರೈತರು ಅಷ್ಟೊಂದು ಪ್ರಮಾಣದಲ್ಲಿ ಸಾಲ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಇಲ್ಲಿನ ರೈತರ ಜೀವನ ಮಟ್ಟ ಇಲ್ಲಿ ಸುಧಾರಿಸಿಲ್ಲ ಜನರು ಅತ್ಯಂತ ಬಡತನದಲ್ಲಿದ್ದಾರೆ ಎಂಬುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅರ್ಥ ಮಾಡಿಕೊಂಡು ವ್ಯವಸ್ಥೆ ಸರಿಪಡಿಸುವುದರತ್ತ ಗಮನಹರಿಸಬೇಕೆಂದರು ಎಂದು ಒತ್ತಾಯಿಸಿದರು.

  ಜೆಡಿಎಸ್ ಪಕ್ಷದಲ್ಲಿ ತಾವು ಹಿರಿಯ ರಾಜಕಾರಣಿ ನಿಜ. ಆದರೆ ಸಚಿವ ಸ್ಥಾನದ ಆಕಾಂಕ್ಷಿಯಾಗಿಲ್ಲ. ಹಾಗಾಗಿ ನನಗೆ ಅಸಮಾಧಾನದ ಪ್ರಶ್ನೆ ಉದ್ಭವಿಸುವುದಿಲ್ಲ. ನಾನೆಂದಿಗೂ ಸಚಿವ ಸ್ಥಾನಕ್ಕೆ ಆಸೆಪಟ್ಟವನಲ್ಲ ಎಂದು ಹೊರಟ್ಟಿ ಹೇಳಿದರು.

  ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿದ ತಾವು  ಶಿಕ್ಷಣ ಸಚಿವನಾಗಬೇಕು ಎಂಬುದು ನಾಡಿನ ಲಕ್ಷಾಂತರ ಶಿಕ್ಷಕರ ಕನಸಾಗಿತ್ತು.ಅವರ ಆಸೆ ಈಡೇರಲಿಲ್ಲ.ತಾವು  ಸಚಿವ ಸ್ಥಾನಕ್ಕೆ ತಲೆಕೆಡಿಸಿಕೊಂಡಿಲ್ಲ. ಅಧಿಕಾರಕ್ಕೆ ಅಂಟಿಕೊಂಡೇ ಕುಳಿತುಕೊಳ್ಳುವ ಜಾಯಮಾನ ತಮ್ಮದಲ್ಲ ಎಂದು ಬಸವರಾಜ್ ಹೊರಟ್ಟಿ ಸ್ಪಷ್ಟಪಡಿಸಿದರು .

Leave a Comment