ಅಧಿಕಾರ ಗಟ್ಟಿಗೊಳಿಸಿ ಅಭಿವೃದ್ಧಿಗೆ ನಾಂದಿ: ಬಿಎಸ್‍ವೈ

ಹುಬ್ಬಳ್ಳಿ, ನ 3: ಉಪಚುನಾವಣೆಯ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಪರ ಅಲೆ ಇದೆ. ಹೆಚ್ಚು ಮತಗಳಿಂದ ಜಯಭೇರಿ ಬಾರಿಸಿ ಅಧಿಕಾರವನ್ನು ಗಟ್ಟಿಗೊಳಿಸಿ ರಾಜ್ಯದ ಅಭಿವೃದ್ಧಿಗೆ ನಾಂದಿ ಹಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ನಾನು ಎಲ್ಲ 15 ಕ್ಷೇತ್ರಗಳಲ್ಲಿಯೂ ಪ್ರಚಾರ ಕೈಗೊಂಡಿದ್ದೇನೆ. ಎಲ್ಲ ಕೆಡೆಗಳಲ್ಲಿ ಬಿಜೆಪಿಗೆ ಜನಬೆಂಬಲವಿದೆ. ಮತದಾರರು ಬಿಜೆಪಿ ಪರವಿದ್ದು, ಜಯ ನಮ್ಮದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ಒಗ್ಗಟ್ಟಾಗಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಯಾವ ಕ್ಷೇತ್ರದಲ್ಲಿಯೂ ಅವರ ಪರವಾದ ವಾತಾವರಣವಿಲ್ಲ. ಕಾಂಗ್ರೆಸ್, ಜೆಡಿಎಸ್‍ನವರಿಗೆ ರಾಮಮೂರ್ತಿ ವಿರುದ್ಧ ಒಬ್ಬ ಅಭ್ಯರ್ಥಿಯನ್ನು ಸಹ ನಿಲ್ಲಿಸಲಾಗಲಿಲ್ಲ. ಈ ಮೂಲಕ ಉಭಯ ಪಕ್ಷದವರು ಸೋಲನ್ನು ಒಪ್ಪಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ತೋರುತ್ತದೆ ಎಂದರು.
ಡಿಸೆಂಬರ್ 9ರ ನಂತರ ಸರ್ಕಾರ ಸ್ಥಿರವಾದ ಮೇಲೆ ರಾಜ್ಯದ ಅಭಿವೃದ್ಧಿಗಾಗಿ ಎಲ್ಲ ಯೋಜನೆಗಳನ್ನು ರೂಪಿಸಿದ್ದೇನೆ. ಬರುವ ಫೆಬ್ರವರಿಯಲ್ಲಿ ರೈತಪರವಾದ ಹೊಸ ಬಜೆಟ್ ಮಂಡಿಸುತ್ತೇನೆ ಎಂದರು.
ಡಿಸೆಂಬರ್ 9ರ ನಂತರ ಬಿಎಸ್‍ವೈ ರಾಜೀನಾಮೆ ನೀಡುತ್ತಾರೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್‍ಗೆ ತಿರುಗೇಟು ನೀಡಿದ ಅವರು ಅಂದು ಏನಾಗುತ್ತದೆ ಎಂಬುದನ್ನು ಎಲ್ಲರೂ ಕಾಯ್ದು ನೋಡಿ. ಅಲ್ಲಿಯವರೆಗೆ ಕಾಂಗ್ರೆಸ್, ಜೆಡಿಎಸ್‍ನವರು ತೆಪ್ಪಗಿರಲಿ ಎಂದು ಬಿಎಸ್‍ವೈ ಕಿಡಿಕಾರಿದರು.

 

Leave a Comment