ಅಧಿಕಾರಿ ಗೈರು: ಎಂಎಲ್‌ಸಿ ತರಾಟೆ

* ಕೆಡಿಪಿ ಸಭೆಗೆ ಶಾಸಕರ ಗೈರು
ದೇವದುರ್ಗ.ಅ.14- ಕೆಡಿಪಿ ತ್ರೈಮಾಸಿಕ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿರುವುದನ್ನು ಮನ ಗಂಡು ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ ಕೆಂಡಾಮಂಡಲಗೊಂಡು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ ಪ್ರಸಂಗ ನಡೆಯಿತು.
ಸ್ಥಳೀಯ ತಾ.ಪಂ. ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದು, ಕೆಡಿಪಿ ತ್ರೈ ಮಾಸಿಕ ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಗೈರು ಹಾಜರಿಗೆ ವಿಧಾನ ಪರಿಷತ್ ಸದಸ್ಯರು ಅಸಮಾಧಾನಗೊಂಡು ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕೃಷಿ ಸಾಲೇನಟ್ ಕಾರ್ಡ್ ರೈತರಿಗೆ ವಿತರಿಸುವಲ್ಲಿ ನಿರ್ಲಕ್ಷ ವಹಿಸಿದ ಕೃಷಿ ಅಧಿಕಾರಿ ಸುಧಾ ಅವರನ್ನು ತರಾಟೆಗೆ ತೆಗೆದುಕೊಂಡು ಕಳೆದ 5 ವರ್ಷಗಳಲ್ಲಿ ಕೇವಲ 20 ಸಾವಿರ ಕಾರ್ಡ್ ವಿತರಿಸಲಾಗಿದೆ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು.
ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಬರಗಾಲ ಬೆಳೆ ಸರ್ವೆ ಮಾಡುವಲ್ಲಿ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ. ಸರಕಾರವು ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದರೂ, ಬೆಳೆ ಸರ್ವೆ ಮಾಡಿ, ರೈತರಿಗೆ ಪರಿಹಾರ ವಿತರಿಸುವಲ್ಲಿ ಕಾಲಹರಣ ಮಾಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡ‌ಸಿದರು.
ಇಂಗಾರು ಬೆಳೆಗೆ ಇಲಾಖೆಯಿಂದ ರೈತರಿಗೆ ಯಾವುದೇ ಕಾರಣಕ್ಕೂ ಬೀಜ ಗೊಬ್ಬರ ವಿತರಿಸುವಲ್ಲಿ ವಿಳಂಬ ನೀತಿ ಅನುಸರಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ತಾಲ್ಲೂಕಿಗೆ 2018-19 ರಲ್ಲಿ 361 ಕೃಷಿ ಹೊಂಡದ ಪೈಕಿ ಕೇವಲ 150 ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು.
ನಕಲಿ ಕ್ರಿಮಿನಾಶಕ ಸಿಂಪಡ‌ಸಿ, 6 ಎಕರೆ ಹತ್ತಿಬೆಳೆ ನಾಶವಾಗಿದ್ದು, ತಕ್ಷಣವೇ ನಕಲಿ ಕ್ರಿಮಿನಾಶಕ ಸರಬರಾಜು ಮಾಡಿದವರ ವಿರುದ್ಧ ಕ್ರಮ ಕೈಗೊಂಡು ಪರಿಹಾರ ನೀಡಬೇಕೆಂದು ರೈತರಾದ ಹನುಮಪ್ಪ ಬೈರಪ್ಪ ಅವರು ಸಭೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು. 6 ಎಕರೆ ಹತ್ತಿ ಬೆಳೆ ಸಪೂರ್ಣ ನಾಶವಾಗಿರುವುದರಿಂದ ಲಕ್ಷಾಂತರ ರೂ. ಹಾನಿಯಾಗಿದ್ದು, ಶೀಘ್ರ ಪರಿಹಾರ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ಮಧ್ಯೆ ಪ್ರವೇಶಿಸಿದ ಸದಸ್ಯರು ನಕಲಿ ಕ್ರಿಮಿನಾಶಕ ಸರಬರಾಜು ಮಾಡಿದ ಗೊಬ್ಬರ ಅಂಗಡಿ ಮಾಲಿಕರ ವಿರುದ್ಧ ಕ್ರಮ ಕೈಗೊಂಡು ರೈತರಿಗೆ ಪರಿಹಾರ ನೀಡಬೇಕೆಂದು ಕೃಷಿ ಅಧಿಕಾರಿ ಸೂಚಿಸಿದರು.
ಕೆಡಿಪಿ ತ್ರೈಮಾಸಿಕ ಸಭೆಯು ಶಾಸಕ ಕೆ.ಶಿವನಗೌಡ ನಾಯಕ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಆದರೆ, ಸಭೆಗೆ ಅವರ ಗೈರು ಎದ್ದು ಕಾಣುತ್ತಿತ್ತು.
ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷ ಹನುಮಂತ್ ಕಟ್ಟಿಮನಿ, ಜಿ.ಪಂ. ಸದಸ್ಯರಾದ ಶರಬಣ್ಣ ಸಾಹುಕಾರ, ಬಸಮ್ಮ ಲಿಂಗನಗೌಡ, ಇಓ ಹಾಲ ಸಿದ್ದಪ್ಪ ಪೂಜಾರಿ ಇದ್ದರು.

Leave a Comment