ಅಧಿಕಾರಿಗಳ ವಿರುದ್ಧ ಗುಡುಗಿದ ಶಾಸಕ ಎಂವಿವಿ

ಮಧುಗಿರಿ, ಸೆ. ೧- ನನ್ನ ಇನ್ನೊಂದು ಮುಖ ಅನಾವರಣಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಶಾಸಕ ಎಂ.ವಿ. ವೀರಭದ್ರಯ್ಯ ಅಧಿಕಾರಿಗಳ ವಿರುದ್ಧ ಗುಡುಗಿದ ಪ್ರಸಂಗ ಜರುಗಿತು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಇಂದಿರಾ ದೇನಾನಾಯ್ಕರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಆಡಳಿತ ವ್ಯವಸ್ಥೆಯಲ್ಲಿ ಜನಗಳಿಗೆ ಸ್ಪಂದನೆ ಮಾಡುವ ಕೆಲಸ ಕಾರ್ಯಗಳು ನಿರೀಕ್ಷೆಗೆ ತಕ್ಕಂತೆ ನಡೆಯುತ್ತಿಲ್ಲ. ಎಲ್ಲಾ ಇಲಾಖೆಗಳ ಬಗ್ಗೆಯೂ ಸಾಕಷ್ಟು ದೂರಗಳು ಬರುತ್ತಿವೆ. ಅದರಲ್ಲೂ ಕಂದಾಯ ಇಲಾಖೆಯಲ್ಲಿ ಪಹಣಿ, ಖಾತೆ, ಪಟ್ಟೆ, ಮ್ಯೂಟೇಷನ್, ಪಾವತಿ ಖಾತೆ ಮಾಡುವುದು ಸೇರಿದಂತೆ ಮುಂತಾದ ಕಾರ್ಯಗಳಾಗಬೇಕಾಗಿದೆ. ವಿದ್ಯಾರ್ಥಿನಿಲಯಗಳ ಬಗ್ಗೆ ಗಂಭೀರವಾದ ದೂರುಗಳಿದ್ದು, ಗಂಭೀರವಾದ ಸಮಸ್ಯೆಗಳಿವೆ. ಗ್ರಾಮ ಪಂಚಾಯ್ತಿಯ ಪಿಡಿಒಗಳು ತಮ್ಮದೇಯಾದ ಕೋಟೆಕಟ್ಟಿಕೊಂಡು ಮೆರೆಯುತ್ತಿದ್ದಾರೆ. ನಾನು ಸೇರಿದಂತೆ ಯಾವ ಜನಪ್ರತಿನಿಧಿಗಳೊಂದಿಗೂ ಸರಿಯಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ. ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ. ನಾನು ಈ ಸಭೆಯಲ್ಲಿ ಪಿಡಿಒಗಳು ಭಾಗವಹಿಸುತ್ತಾರೆಂಬ ಭಾವನೆಯಿಂದ ಬಂದಿದ್ದೆನು. ಮುಂಬರುವ ದಿನಗಳಲ್ಲಿ ಪಿಡಿಒಗಳ ಪ್ರತ್ಯೇಕ ಸಭೆ ಕರೆದು ಮಾತನಾಡಬೇಕಾಗಿದೆ ಎಂದರು.

ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ನಾವೆಲ್ಲಾ ಜನಸೇವಕರೆಂಬ ಭಾವನೆಯಿಂದ ಸೇವೆ ಮಾಡಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಜನಗಳಿಗೂ ತುಂಬಾ ಅರಿವಿದೆ. ಒಮ್ಮೊಮ್ಮೆ ಹುಚ್ಚುಚ್ಚಾಗಿ, ಆಕ್ರೋಶವಾಗಿ ಮಾತನಾಡುತ್ತಾರೆ. ಕಾನೂನು ವಿರುದ್ಧ ಬೇಡಿಕೆ ಇಡುತ್ತಾರೆ. ಕಾನೂನು ವಿರುದ್ಧ ಮಾಹಿತಿ ಕೇಳುತ್ತಾರೆ. ಅಧಿಕಾರಿಗಳು ತಾಳ್ಮೆಯಿಂದ ಇರಬೇಕಾಗಿರುತ್ತದೆ. ಅಧಿಕಾರಿಗಳ ಕಷ್ಟಸುಖಗಳ ಅರಿವಿದೆ. ಆದರೂ ಜನಸಾಮಾನ್ಯರನ್ನು ಪ್ರೀತಿಯಿಂದ ಕರೆದು ಕೂರಿಸಿ ಅವರ ಸಮಸ್ಯೆಯನ್ನು ಆಲಿಸಬೇಕಾಗಿರುತ್ತದೆ. ಅವರನ್ನು ಗೌರವದಿಂದ, ಸಮಾಧಾನಪಡಿಸುವುದು ಸಹ ಒಂದು ಕೆಲಸ ಮಾಡಿದಂತೆಯೇ ಅವರಿಗೆ ಕಾನೂನಿನ ಅರಿವು ಮಾಡಿಕೊಡಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಶಾಹಿ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ. ಕಠಿಣವಾಗಿ ವರ್ತಿಸಿದಲ್ಲಿ ಆಡಳಿತ ವ್ಯವಸ್ಥೆಯೇ ನಮ್ಮ ಕೈಬಿಟ್ಟು ಹೋಗುತ್ತದೆ. ಸದಾ ನಿಮಗೆ ನನ್ನ ಬೆಂಬಲವಿರುತ್ತದೆ. ಸರ್ಕಾರದಿಂದ ಏನುಬೇಕಾದರೂ ಮಂಜೂರು ಮಾಡಿಸಿಕೊಂಡು ಬರುವ ಸಾಮರ್ಥ್ಯವಿದೆ. ಅನುದಾನ ತರುತ್ತೇನೆ. ನಾನು ನಿಮ್ಮೊಂದಿಗೆ ಗೌರವದಿಂದ ನಡೆದುಕೊಂಡು, ಗೌರವದಿಂದ ಕೆಲಸ ತೆಗೆದುಕೊಂಡು ಹೋಗಬೇಕೆಂಬ ಸಿದ್ದಾಂತ ನಂಬಿ ಬಂದವನು. ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೆಳಗಿರುವ ಅಧಿಕಾರಿಗಳು ಮತ್ತು ನೌಕರರನ್ನು ಸರಿಯಾದ ರೀತಿಯಲ್ಲಿ ಕೊಂಡೊಯ್ಯುವ ಪ್ರಯತ್ನ ಮಾಡಬೇಕಾಗಿದೆ. ಶಿಷ್ಠಾಚಾರ ಉಲ್ಲಂಘನೆ ಬಗ್ಗೆ ಅಧ್ಯಕ್ಷರಾದ ಇಂದಿರಾ ದೇನಾನಾಯ್ಕ ಮತ್ತು ಗರಣಿ ಕ್ಷೇತ್ರದ ಸದಸ್ಯ ರಾಜು ಪ್ರಸ್ತಾವನೆ ಮಾಡಿದಾಗ ಮುಂಬರುವ ದಿನಗಳಲ್ಲಿ ಈ ರೀತಿ ನಡೆಯದಂತೆ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಶಾಸಕರು ಸಮಾಧಾನಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಇಂದಿರಾ ದೇನಾನಾಯ್ಕ ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಗೆ ಬರುವ ಹೂವಿನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೆ ನನಗೆ ಆಹ್ವಾನವಿಲ್ಲ. ಗರಣಿ ಕ್ಷೇತ್ರದ ವ್ಯಾಪ್ತಿ ಚನ್ನಮಲ್ಲನಹಳ್ಳಿ ಗ್ರಾಮದಲ್ಲಿ ಎತ್ತಿನಹೊಳೆ ಯೋಜನಾ ಉಪವಿಭಾಗ ಇಲಾಖೆ ಕಾಮಗಾರಿ ಪ್ರಾರಂಭೋತ್ಸವಕ್ಕೆ ನನ್ನನ್ನಾಗಲಿ, ಆ ಕ್ಷೇತ್ರದ ಸದಸ್ಯರನ್ನಾಗಲಿ ಆಹ್ವಾನಿಸಿಲ್ಲ. ಕೊಡಿಗೇನಹಳ್ಳಿ ಹೋಬಳಿ ವೆಂಗಳಮ್ಮನಹಳ್ಳಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಗುದ್ದಲಿ ಪೂಜೆಗೆ ಜನಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ ಎಂದು ಆರೋಪ ಮಾಡಿದರು. ಸಭೆಗೆ ಗೈರು ಹಾಜರಾದವರ ಬಗ್ಗೆ ಮಾತನಾಡಿ ಪ್ರತಿ ಸಭೆಯಲ್ಲೂ ಗೈರು ಹಾಜರಾದವರಿಗೆ ನೋಟಿಸ್ ಕಳಿಸಿ ಸುಮ್ಮನಾಗುತ್ತೀರಾ. ಈ ಭಾರಿ ಠರಾವು ಪುಸ್ತಕದಲ್ಲಿ ಬರೆದು ಜಿಲ್ಲಾ ಪಂಚಾಯ್ತಿಗೆ ಕಳಿಸಿ ಒಬ್ಬಿಬ್ಬರು ಅಮಾನತ್ತಾದರೆ ಬುದ್ದಿ ಬರುತ್ತದೆ ಎಂದರು.

ಗರಣಿ ಕ್ಷೇತ್ರದ ಸದಸ್ಯ ರಾಜು ಮಾತನಾಡಿ, ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಬಗ್ಗೆ ಕಿಂಚಿತ್ತೂ ಗೌರವವಿಲ್ಲ. ಸಭೆಸಮಾರಂಭಗಳಿಗೆ ಆಹ್ವಾನಿಸುವುದಿಲ್ಲ. ಇತ್ತೀಚೆಗೆ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟ ಏರ್ಪಡಿಸಿ ಖಾಸಗಿ ವ್ಯಕ್ತಿಗೆ ಜವಾಬ್ದಾರಿ ನೀಡುವುದು ಎಷ್ಟು ಸರಿ. ಒಂದು ರಾಜಕೀಯ ಪಕ್ಷದ ಮುಖಂಡನಿಗೆ ವ್ಯವಸ್ಥೆಯ ಜವಾಬ್ದಾರಿ ನೀಡಿದಲ್ಲಿ ಅದರ ಫಲಿತಾಂಶ ಎಷ್ಟರಮಟ್ಟಿಗಿರುತ್ತದೆ ಎಂಬುದನ್ನು ಊಹಿಸಬೇಕಾಗುತ್ತದೆ. ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳೆ ಹೋಣೆಗಾರರಾಗುತ್ತಾರೆ ಎಂದು ತಿಳಿಸಿದರು.

ಸ್ಥಾಯಿಸಮಿತಿ ಅಧ್ಯಕ್ಷ ರಾಮಣ್ಣ ಮಾತನಾಡಿ, ನಾವು ತಾಲ್ಲೂಕು ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾದಾಗಿನಿಂದಲೂ ಇಲ್ಲಿಯವರೆಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸಭೆಗೆ ಹಾಜರಾಗಿಲ್ಲ. ಇವರ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ. ಹಿಂದಿನ ಸರ್ಕಾರವಿದ್ದಾಗ ಈಗಾಗಲೇ ಜಿಪಿಎಸ್ ಆಗಿರುವ ಮನೆಗಳು ಬದಲಾವಣೆಯಾಗುತ್ತವೆ ಎಂಬ ಸುದ್ದಿ ಕೇಳಿ ಬರುತ್ತಿದೆ ಎಂದು ಪ್ರಶ್ನಿಸಿದಾಗ ಶಾಸಕರು ಉತ್ತರಿಸಿ ಜಿಪಿಎಸ್ ಆಗಿರುವ ಮನೆಗಳು ಯಾವುದೇ ಕಾರಣಕ್ಕೂ ಬದಲಾವಣೆಯಾಗುವುದಿಲ್ಲ ಎಂದರು.

ಮಿಡಿಗೇಶಿ ಕ್ಷೇತ್ರ ಸದಸ್ಯೆ ಯಶೋಧ ಮಾತನಾಡಿ, ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರ ಗಡಿಯಲಿದ್ದು, ಆಂಬ್ಯೂಲೆನ್ಸ್ ಇಲ್ಲದಿರುವುದು ಜನರಿಗೆ ತುಂಬಾ ಸಮಸ್ಯೆಯಾಗಿದೆ ಎಂದಾಗ ನಮ್ಮ ತಾಲ್ಲೂಕಿನಲ್ಲಿ ಒಟ್ಟು 4 ಆಂಬ್ಯೂಲೆನ್ಸ್ ಇದ್ದು, ಒಂದು ಅಪಘಾತದಿಂದಾಗಿ ಕೇವಲ 3 ಮಾತ್ರ ಕೆಲಸ ನಿರ್ವಹಿಸುತ್ತಿವೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಉತ್ತರ ನೀಡಿದರು.

2018-19ನೇ ಸಾಲಿನ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯ ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗಿರುವ ಲಿಂಕ್ ಡಾಕ್ಯೂಮೆಂಟ್ ಅನುದಾನಕ್ಕೆ ಇಲಾಖೆಗಳು ತಯಾರಿಸಿರುವ ಕ್ರಿಯಾ ಯೋಜನೆ ಬಗ್ಗೆ ಚರ್ಚಿಸಿ ಜಿಲ್ಲಾ ಪಂಚಾಯತ್ ಕಛೇರಿಗೆ ಅನುಮೋದನೆಗೆ ಸಲ್ಲಿಸುವಂತೆ ತೀರ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿಯ ಉಪಸಮಿತಿಗಳಾದ ಹಣಕಾಸು ಲೆಕ್ಕ ಪರಿಶೋಧನಾ ಮತ್ತು ಯೋಜನಾ ಸಮಿತಿ, ಸಾಮಾನ್ಯ ಸ್ಥಾಯಿಸಮಿತಿ ಮತ್ತು ಸಾಮಾಜಿಕ ನ್ಯಾಯ ಸಮಿತಿಗಳನ್ನು ಪುನರ್‌ರಚಿಸುವ ಬಗ್ಗೆ ಚರ್ಚಿಸಲಾಯಿತು.

Leave a Comment