ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು, ಜು.11- ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಾನೂನು ಬಾಹಿರವಾಗಿ 124ಬೋಧಕೇತರ ಸಿಬ್ಬಂದಿಗಳನ್ನು ನೇಮಕ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸಿ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ವಿಶ್ವವಿದ್ಯಾನಿಲಯದ ಎದುರಿರುವ ಅಂಬೇಡ್ಕರ್ ಪ್ರತಿಮೆ ಬಳಿಯಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮೈಸೂರು ವಿಶ್ವವಿದ್ಯಾನಿಲಯದ ಕಾನೂನು ಕಾಯ್ದೆ 2000ನ್ನು ಉಲ್ಲಂಘಿಸಿ 124 ಬೋಧಕೇತರ ಸಿಬ್ಬಂದಿಯನ್ನು ಅಕ್ರಮವಾಗಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊ.ಕೆ.ಎಸ್.ರಂಗಪ್ಪ ಆಡಳಿತಾಂಗ ಕುಲಸಚಿವರಾಗಿದ್ದ ಪ್ರೊ.ರಾಜಣ್ಣ ಮತ್ತು ಉಪಕುಲಸಚಿವರಾಗಿದ್ದ ಶ್ರೀಕಂಠ ಅವರು ನೇಮಕಾತಿ ಮಾಡಿದ್ದಾರೆ. ಈ ನೇಮಕಾತಿಯಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅನುಮತಿ ಪಡೆಯದೇ, ಮೀಸಲಾತಿಯನ್ನು ಅನುಸರಿಸದೇ, ಯಾವುದೇ ಅಧಿಸೂಚನೆಯನ್ನು ಹೊರಡಿಸದೇ, ಪತ್ರಿಕಾ ಜಾಹೀರಾತನ್ನು ನೀಡದೇ ತಮಗೆ ಮನಬಂದಂತೆ ಹುದ್ದೆ ಭರ್ತಿ ಮಾಡಿದ್ದಾರೆ. ಅನೇಕ ಕಡೆ ಹುದ್ದೆ ಸೃಷ್ಟಿಸಿದ್ದಾರೆ. ಅನುಪಯುಕ್ತ ಹುದ್ದೆಗಳನ್ನು ಸೃಷ್ಟಿಸಿ ಭ್ರಷ್ಟಾಚಾರ ಮಾಡಿದ್ದಾರೆ. ಕರ್ನಾಟಕ ರಾಜ್ಯ ಹೈಕೋರ್ಟ್ ಪ್ರೊ.ರಾಜಣ್ಣ ಅವರನ್ನು ಕುಲಸಚಿವರನ್ನಾಗಿ ನೇಮಕ ಮಾಡಬಾರದು ಎಂದು ತೀರ್ಪು ನೀಡಿದೆ. ಆದರೂ ಸರ್ಕಾರ ಇವರನ್ನು ನೇಮಕ ಮಾಡಿ ನ್ಯಾಯಾಂಗ ನಿಂದನೆ ಎಸಗಿದೆ. ಸಾರ್ವಜನಿಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ನಡೆಸುತ್ತಿರುವವರನ್ನು ರಕ್ಷಿಸುತ್ತಿರುವ ವಿವಿಯ ಕ್ರಮ ಸರಿಯಲ್ಲ. ಕೂಡಲೇ ಇವರನ್ನು ಕ್ರಿಮಿನಲ್ ಮೊಕದ್ದಮೆಗೊಳಪಡಿಸಿ ಅಕ್ರಮವಾಗಿ ನೇಮಕವಾದವರನ್ನು ಹುದ್ದೆಯಿಂದ ವಜಾಗೊಳಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಮಹದೇವಸ್ವಾಮಿ, ಗೌರವಾಧ್ಯಕ್ಷ ಗೋಪಾಲ್ ಎಸ್, ಪ್ರಧಾನ ಕಾರ್ಯದರ್ಶಿ ಮಹೇಶ್ ಸೋಸ್ಲೆ, ಕಾರ್ಯದರ್ಶಿ ನಾಗೇಂದ್ರ, ರಘು, ಪ್ರಕಾಶ್, ವಸಂತಕುಮಾರ್ ದೊಡ್ಡಮನಿ, ಸೌಮ್ಯ, ಮನೋಜ್ ಕುಮಾರ್.ಅಕ್ಷತಾ, ದಿವಾಕರ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Leave a Comment