ಅಧಿಕಾರಿಗಳ ಉತ್ತಮ ಕಾರ್ಯನಿರ್ವಹಣೆಗೆ ಜನಪ್ರತಿನಿಧಿಗಳ ಸಹಕಾರ ಅಗತ್ಯ

.
ಕೊರಟಗೆರೆ, ಆ. ೧೩- ಗ್ರಾಮ ಪಂಚಾಯ್ತಿ ಅಧಿಕಾರಿಗಳ ಉತ್ತಮ ಸೇವೆಯೇ ಗ್ರಾಮೀಣ ಪ್ರದೇಶದ ಬಡಜನರ ಅಭಿವೃದ್ದಿಗೆ ಸಹಕಾರಿಯಾಗಿದೆ. ಗ್ರಾಮಗಳ ಅಭಿವೃದ್ದಿಗಾಗಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ ಎಂದು ತಾ.ಪಂ. ಅಧ್ಯಕ್ಷ ಕೆಂಪರಾಮಯ್ಯ ತಿಳಿಸಿದರು.

ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಅಧಿಕಾರಿಗಳ ನೌಕರರ ಸಂಘದ ವತಿಯಿಂದ ವರ್ಗಾವಣೆಗೊಂಡ ಅಧಿಕಾರಿಗಳಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನ 24 ಗ್ರಾ.ಪಂ.ಗಳ ಅಭಿವೃದ್ಧಿಗಾಗಿ ಉತ್ತಮ ಮಾರ್ಗದರ್ಶಕರಾಗಿ ಇಓ ಮೋಹನಕುಮಾರ್ ಕಳೆದ ಎರಡು ವರ್ಷದಿಂದ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇವರ ದೈನಂದಿನ ಕೆಲಸ ಮಾರ್ಗಸೂಚಿ ಇತರೇ ಅಧಿಕಾರಿಗಳಿಗೆ ಆದರ್ಶವಾಗಲಿ. ರಾಜಕೀಯ ಒತ್ತಡಕ್ಕೆ ಮಣಿಯದೇ ಪ್ರತಿಯೊಬ್ಬ ಅಧಿಕಾರಿಯು ಬಡಜನರ ಒಳಿತಿಗಾಗಿ ಕೆಲಸ ಮಾಡುವಂತೆ ಸೂಚಿಸಿದರು.

ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ವೀರಕ್ಯಾತರಾಯ ಮಾತನಾಡಿ, ಸಾರ್ವಜನಿಕ ಕ್ಷೇತ್ರದಲ್ಲಿ ಸರ್ಕಾರಿ ಕೆಲಸದ ಮೂಲಕ ಬಡಜನರ ಸೇವೆ ಮಾಡುವುದೇ ನಮ್ಮ ಪುಣ್ಯ. ಸರ್ಕಾರ ನೀಡುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ಕ್ಷೇತ್ರದ ಜನರ ಅಭಿವೃದ್ದಿಗೆ ಶ್ರಮಿಸಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಇಓ ಮೋಹನಕುಮಾರ್, ನನ್ನ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಆ.15 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ಬಹಿರ್ದೆಸೆ ಮುಕ್ತ ತಾಲ್ಲೂಕಾಗಿ ಘೋಷಣೆ ಮಾಡುವುದೇ ಗ್ರಾ.ಪಂ. ಅಧಿಕಾರಿಗಳು ನನಗೆ ಕೂಡುವಂತಹ ದೊಡ್ಡ ಉಡುಗೊರೆಯಾಗಿದೆ. ಸರ್ಕಾರಿ ನೌಕರರು ಬಡಜನರ ಕೆಲಸವನ್ನು ನಿಷ್ಠೆಯಿಂದ ಮಾಡಿದಾಗ ಮಾತ್ರ ನಮ್ಮ ಸೇವೆಗೆ ತಕ್ಕ ಪ್ರತಿಫಲ ಸಿಗಲಿದೆ ಎಂದು ಹೇಳಿದರು.

ಕೊರಟಗೆರೆಯಿಂದ ಬೇರೆ ತಾಲ್ಲೂಕಿಗೆ ವರ್ಗಾವಣೆಯಾದ ಇಓ ಮೋಹನಕುಮಾರ್, ಅಕ್ಷರ ದಾಸೋಹದ ಎಲ್.ಕಾಮಯ್ಯ, ನರೇಗಾ ತಾಂತ್ರಿಕ ಸಿಬ್ಬಂದಿಗಳಾದ ಮಧು, ಮಧುಶ್ರೀ, ದಿವ್ಯಾಶ್ರೀ, ರಾಮಯ್ಯ, ರಮೇಶ್, ರವಿ, ಸಾಮಾಜಿಕ ಲೆಕ್ಕಾ ಪರಿಶೋಧಕ ಅನಂತ್‌ರವರನ್ನು ಆರ್‍ಡಿಪಿಆರ್ ಅಧಿಕಾರಿಗಳ ನೌಕರರ ಸಂಘದಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾ.ಪಂ. ಉಪಾಧ್ಯಕ್ಷ ನರಸಮ್ಮ, ಸದಸ್ಯರಾದ ವೀರಣ್ಣ, ಟಿ.ಸಿ. ರಾಮಯ್ಯ, ರಾಮಸ್ವಾಮಿ, ಎಸ್‍ಎಲ್‍ಎನ್ ಸ್ವಾಮಿ, ಬಿಇಓ ಚಂದ್ರಶೇಖರ್, ತಾ.ಪಂ. ಲೆಕ್ಕಾಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಆರ್‍ಡಿಪಿಆರ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಆರ್.ರಾಘವೇಂದ್ರ, ತಾಲ್ಲೂಕು ಅಧ್ಯಕ್ಷ ಟಿ.ಎನ್. ರಾಮಚಂದ್ರರಾವ್, ಕಾರ್ಯದರ್ಶಿ ಸುನೀಲ್‍ಕುಮಾರ್, ಉಪಾಧ್ಯಕ್ಷೆ ಪೃಥ್ವಿಭಾ, ಖಜಾಂಚಿ ಹನುಮಂತರಾಜು, ಗ್ರಾ.ಪಂ. ಕಾರ್ಯದರ್ಶಿ ಮತ್ತಿತರರು ಉಪಸ್ಥಿತರಿದ್ದರು.

Leave a Comment