ಅಧಿಕಾರಿಗಳಿಗೆ ಸಿಎಂ ತಾಕೀತು :ಬರಪರಿಹಾರಕ್ಕೆ ಸಮರೋಪಾದಿ ಸಿದ್ಧತೆ: ಲೋಪವೆಸಗಿದರೆ ನಿರ್ದಾಕ್ಷಿಣ್ಯ ಕ್ರಮ

ಬೆಂಗಳೂರು, ಮೇ ೧೫- ಲೋಕಸಭಾ ಚುನಾವಣೆ ಪ್ರಕ್ರಿಯೆ ರಾಜ್ಯದಲ್ಲಿ ಮುಗಿದಿರುವ ಹಿನ್ನೆಲೆಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕು. ಈ ವಿಚಾರದಲ್ಲಿ ಯಾರೇ ಕರ್ತವ್ಯ ಲೋಪವೆಸಗಿದರೂ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದಿಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

  •  ಡಿಸಿಗಳು ಮತ್ತು ಸಿಇಒಗಳೊಂದಿಗೆ ಸಭೆ.
  •  ಬರಪರಿಹಾರ ಸಮರೋಪಾದಿಯಲ್ಲಿ ಕೈಗೊಳ್ಳಿ.
  •  ಅಧಿಕಾರಿಗಳಿಗೆ ಮುಖ್ಯಮಂತ್ರಿ ಖಡಕ್ ಸೂಚನೆ.
  •  ನಿರ್ಲಕ್ಷ್ಯ ಮಾಡಿದರೆ, ಕಠಿಣ ಕ್ರಮದ ಎಚ್ಚರಿಕೆ.
  •  ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ.
  •  ಬರಪರಿಹಾರ ಕಾಮಗಾರಿಗೆ ಹೆಚ್ಚಿನ ಅನುದಾನ ನೀಡಲು ಸಿದ್ಧ.
  • * ಅನುದಾನ ಸದ್ಭಳಕೆ ಮಾಡಿಕೊಳ್ಳಲು ಕಟ್ಟೆಚ್ಚರಿಕೆ.

ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಲ್ಬುರ್ಗಿ ಮತ್ತು ಧಾರವಾಡ ಜಿಲ್ಲಾಧಿಕಾರಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಕೃಷ್ಣಾದಲ್ಲಿಂದು ವಿಡಿಯೋ ಸಂವಾದ ನಡೆಸಿದ ಸಂದರ್ಭದಲ್ಲಿ ಅವರು ಈ ಎಚ್ಚರಿಕೆ ನೀಡಿದರು.

ಬರಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನೆ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಮತ್ತಿತರ ಕಾರ್ಯಕ್ರಮಗಳನ್ನು ಮುಂದುವರೆಸಲು ಯಾವುದೇ ನಿರ್ಬಂಧ ಇಲ್ಲ ಎಂದು ಇತ್ತೀಚೆಗಷ್ಟೇ ಚುನಾವಣಾ ಆಯೋಗ ಹೇಳಿದ್ದರ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಿಡಿಯೋ ಸಂವಾದ ನಡೆಸಿದರು.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬರಪರಿಹಾರ ಕಾಮಗಾರಿಗಳ ಕುರಿತು ಅಧಿಕಾರಿಗಳ ಸಭೆ ನಡೆಸಲು ಅವಕಾಶ ಇರಲಿಲ್ಲ. ಇಂತಹ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ನೀತಿ ಸಂಹಿತೆ ಅಡ್ಡಿ ಬರುವುದರಿಂದ ನಿಯಮಗಳನ್ನು ಸಡಿಲಗೊಳಿಸುವಂತೆ ರಾಜ್ಯ ಸರ್ಕಾರ ಮಾಡಿಕೊಂಡಿದ್ದ ಮನವಿಗೆ ಆಯೋಗ ಸಮ್ಮತಿಸಿತ್ತು.

ಸತತ ಬರಗಾಲದಿಂದ ರಾಜ್ಯದ ಜನರು ತತ್ತರಿಸಿದ್ದಾರೆ. ಇಂಥ ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ನಿರ್ಲಕ್ಷ್ಯ ತೋರಿದಲ್ಲಿ ಕಾನೂನು ರೀತಿಯ ಕ್ರಮವನ್ನು ಎದುರಿಸಬೇಕಾದೀತು ಎಂದು ತಾಕೀತು ಮಾಡಿದರು.
ಎಲ್ಲ ಜಿಲ್ಲೆಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಕೈಗೊಂಡಿರುವ ಕ್ರಮಗಳ ಜತೆಗೆ ಅಗತ್ಯ ಇರುವ ಕಡೆ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಲು ಹಣದ ಕೊರತೆ ಇಲ್ಲ. ಜಿಲ್ಲಾಧಿಕಾರಿಗಳ ಬಳಿ ಇರುವ ಹಣವನ್ನು ಈ ರೀತಿಯ ಕಾಮಗಾರಿಗಳಿಗೆ ಬಳಸಿಕೊಳ್ಳತಕ್ಕದ್ದು. ಅಗತ್ಯವೆನಿಸಿದರೆ ಇನ್ನು ಹೆಚ್ಚಿನ ಹಣ ಒದಗಿಸಲು ಸರ್ಕಾರ ಸಿದ್ದವಿದೆ ಎಂದರು.

ಜಾನುವಾರುಗಳಿಗೆ ಮೇವು ಒದಗಿಸಲು ಹಾಗೂ ಗೋಶಾಲೆಗಳನ್ನು ತೆರೆಯಲು ಅಧಿಕಾರಿಗಳು ಮುಂದಾಗಬೇಕು. ಅಂತಾರಾಜ್ಯ ಮೇವು ಸಾಗಾಣಿಕೆಗೆ ಅಗತ್ಯವೆನಿಸಿದಲ್ಲಿ ನಿರ್ಬಂಧ ಹೇರಬೇಕು ಎಂದು ಅವರು ಸೂಚಿಸಿದರು.

ಉದ್ಯೋಗ ಅರಸಿ ಜನರು ಗುಳೆ ಹೋಗುವುದನ್ನು ತಪ್ಪಿಸಲು ಮನರೇಗಾ ಯೋಜನೆಯಡಿ ಕೆಲಸ ಒದಗಿಸಬೇಕು. ಕೇಂದ್ರ ಸರ್ಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿದರೂ ರಾಜ್ಯ ಸರ್ಕಾರ ಈಗಾಗಲೇ 1200 ಕೋಟಿ ರೂ. ಬಿಡುಗ‌ಡೆ ಮಾಡಲಾಗಿದೆ. ಕೇಂದ್ರದಿಂದ 2 ಸಾವಿರ ಕೋಟಿಗೂ ಅಧಿಕ ಮೊತ್ತ ಬಿಡುಗಡೆಯಾಗಬೇಕಾಗಿದೆ ಎಂದರು.
ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ, ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

 

Leave a Comment