ಅಧಿಕಾರಿಗಳಿಂದಲೇ ಕಡ್ಡಾಯ ಹೆಲ್ಮೆಟ್ ಉಲ್ಲಂಘನೆ-ಅಸಮಾಧಾನ

ರಾಯಚೂರು.ಫೆ.17- ಸರ್ಕಾರಿ ಅಧಿಕಾರಿಗಳೇ ಹೆಲ್ಮೆಟ್ ಕಡ್ಡಾಯ ನಿಯಮಾವಳಿ ಉಲ್ಲಂಘಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ಆದೇಶಿಸಿದ ಅವರು, ಇದಕ್ಕಾಗಿ ನೋಡಲ್ ಅಧಿಕಾರಿ ನೇಮಿಸುವುದಾಗಿ ಹೇಳಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕರೆದ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರು ಹೆಲ್ಮೆಟ್ ಕಡ್ಡಾಯ ಅನುಷ್ಠಾನಕ್ಕೆ ಪೂರ್ವ ಸರ್ಕಾರಿ ಅಧಿಕಾರಿಗಳು ಈ ನಿಯಮವನ್ನು ಚಾಚು ತಪ್ಪದೆ ಪಾಲಿಸಬೇಕು. ಇದನ್ನು ನಿಗಾವಹಿಸಲು ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸುವುದಾಗಿ ಹೇಳಿದರು. ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿ, ರಸ್ತೆ ಸುರಕ್ಷತೆಗೆ ಕ್ರಮ ವಹಿಸುವಂತೆ ಸೂಚಿಸಿದರು. ನಗರ ಸೇರಿ ಜಿಲ್ಲೆಯಾದ್ಯಂತ ರಸ್ತೆ ಅಪಘಾತಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಲು ಕಡ್ಡಾಯ ಹೆಲ್ಮೆಟ್ ಧರಿಸದಿರುವುದೇ ಪ್ರಮುಖ ಕಾರಣವಾಗಿದೆ.
ಮೇಲ್ಕಂಡ ನಿಯಮಾವಳಿ ಪಾಲಿಸದೇ ಸಂಚರಿಸುವ ವಾಹನ ಸವಾರರ ಪರವಾನಿಗೆ ರದ್ದು ಮಾಡಬೇಕು. ಚತುಷ್ಪಥ ರಸ್ತೆಯಲ್ಲಿ ರೈಸಿಂಗ್ ಪೈಪ್‌ಲೈನ್ ಸೋರಿಕೆಯಿಂದ ನೀರು ರಸ್ತೆಗೆ ಹರಿಯುವಂತಾಗಿದೆ. ಶೀಘ್ರವೇ ದುರಸ್ತಿ ಕಾರ್ಯಗೊಳ್ಳುವಂತೆ ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ ಅವರಿಗೆ ತಾಕೀತು ಮಾಡಿದರು.

ನಗರಸಭೆ ಉಪಾಧ್ಯಕ್ಷ ಜಯಣ್ಣ ಮಾತನಾಡಿ, ರೈಸಿಂಗ್ ಪೈಪ್‌ಲೈನ್ ಸ್ಟೇಷನ್ ರಸ್ತೆಯ ಮಧ್ಯಭಾಗದಲ್ಲಿ ಅಳವಡಿಕೆ ಮಾಡಿರುವುದೇ ನೀರು ಸೋರಿಕೆಗೆ ಪ್ರಮುಖ ಕಾರಣವಾಗಿದೆ. ಪೈಪ್‌ಲೈನ್ ರಸ್ತೆ ಬದಿ ಸ್ಥಳಾಂತರಕ್ಕೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಅನುದಾನ ನೀಡಲು ಸಿದ್ಧವೆಂದು ಹೇಳಿದರು.

ರೈಸಿಂಗ್ ಪೈಪ್‌ಲೈನ್ ರಸ್ತೆ ಬದಿ ಅಳವಡಿಕೆಗೆ ಶೀಘ್ರವೇ ಯೋಜನೆ ರೂಪಿಸಿ ಶಾಶ್ವತ ಪರಿಹಾರ ಕೈಗೊಳ್ಳಲಾಗುತ್ತದೆಂದು ಜಿಲ್ಲಾಧಿಕಾರಿ ಹೇಳಿದರು. ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿ, ವಾಹನ ವೇಗ ನಿಯಂತ್ರಣಕ್ಕೆ ವ್ಯವಸ್ಥಿತ ಪರಿಶೀಲನೆಯೊಂದಿಗೆ ವೇಗಮಿತಿ ನಿಗದಿಪಡಿಸಲು ನಿರ್ಧರಿಸಲಾಯಿತು. ಜಿಲ್ಲೆಯ 62 ಬ್ಲಾಕ್ ಸ್ಪಾಟ್‌ಗಳಲ್ಲಿ ಗಸ್ತು ಬಲಪಡಿಸಿ, ಈ ಕುರಿತು ವರದಿ ಸಲ್ಲಿಕೆ ಮಾಡುವಂತೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸ್ಪಷ್ಟಸೂಚನೆ ನೀಡಿದರು.
ಪ್ರಮುಖ ರಸ್ತೆಗಳಲ್ಲಿ ಸಂಚಾರ ಸಿಗ್ನಲ್, ಕ್ರಾಸಿಂಗ್ ಲಿಂಕರ್ಸ್, ವಿದ್ಯುತ್ ಉಪಕರಣ ಅಳವಡಿಕೆ ಒಂದೇ ರಸ್ತೆಯಲ್ಲಿ ಭಾರೀ ಗಾತ್ರದ ವಾಹನ ಸಂಚಾರ ನಿರ್ಬಂಧ ಸೇರಿ ರಾಷ್ಟ್ರೀಯ ಹಾಗೂ ಹಾಲಿ ಅಸ್ತಿತ್ವದಲ್ಲಿರುವ ನೂತನ ರಸ್ತೆ ನಿರ್ಮಾಣ ತ್ವರಿತಗತಿ ಪೂರ್ಣಕ್ಕೆ ಸೂಚಿಸಲಾಯಿತು.
ಎಸ್ಪಿ ಚೇತನಸಿಂಗ್ ರಾಥೋರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment