ಅದ್ಭುತ, ರುದ್ರ ರಮಣೀಯ ನಂದಿಬೆಟ್ಟ

ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಮಾನ್ಯತೆ ಪಡೆದಿರುವ ಪ್ರವಾಸಿಗರ ಸ್ವರ್ಗ ಹಾಗೂ ಬಡವರ ಪಾಲಿನ ಊಟಿ ಎಂದೇ ಪ್ರಸಿದ್ಧಿಯಾಗಿರುವ ನಂದಿಬೆಟ್ಟ ದಿನದಿಂದ ದಿನಕ್ಕೆ ತನ್ನ ಪ್ರಾಕೃತಿಕ ಸಿರಿಯ ಸೊಬಗಿನ ಕಾರಣದಿಂದ ಹೆಚ್ಚಿನ ಜನಪ್ರಿಯತೆ ಗಳಿಸಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು 60 ಕಿ.ಮೀ. ದೂರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದ ಸುಮಾರು 20 ಕಿ.ಮೀ. ದೂರದಲ್ಲಿ ಸಮುದ್ರ ಮಟ್ಟದಿಂದ 4,851 ಅಡಿ ಎತ್ತರದಲ್ಲಿ ಭೂಮಟ್ಟದಿಂದ 2 ಸಾವಿರ ಅಡಿ ಎತ್ತರದಲ್ಲಿ, ಮೇಲ್ಭಾಗದಲ್ಲಿ 65 ಎಕರೆ ವಿಸ್ತೀರ್ಣದಲ್ಲಿ ಸುತ್ತಲಿನ ತಳಭಾಗದಲ್ಲಿ 95 ಎಕರೆ ವಿಸ್ತೀರ್ಣದಲ್ಲಿ ಇರುವುದೇ ನಂದಿಬೆಟ್ಟ.

ನಂದಿಬೆಟ್ಟದಲ್ಲಿ ಆರಾಧ್ಯ ದೈವ ಶ್ರೀ ನಂದೀಶ್ವರ ದೇವಾಲಯ ಪುರಾತನವಾಗಿದ್ದು, ಲಿಂಗರೂಪದಲ್ಲಿ ಈಶ್ವರನ ದರ್ಶನ ಮಾಡಲು ಸಾವಿರಾರು ಮಂದಿ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಮಹಾಶಿವರಾತ್ರಿಯ ವೈಭವವನ್ನು ನಂದಿಬೆಟ್ಟದಲ್ಲಿ ನೋಡುವುದೇ ಪ್ರವಾಸಿಗರ ಕಣ್ಣಿಗೆ ಹಬ್ಬದಂತಾಗುತ್ತದೆ.

ನಂದಿಬೆಟ್ಟದಲ್ಲಿ ರುದ್ರರಮಣೀಯ ಎನಿಸುವ ಟಿಪ್ಪು ಡ್ರಾಪ್ ಅತ್ಯಂತ ಪ್ರಸಿದ್ಧಿ ಹೊಂದಿರುವ ಪ್ರೇಕ್ಷಣೀಯ ಸ್ಥಳವಾಗಿದ್ದು, ಈ ಟಿಪ್ಪು ಡ್ರಾಪ್ ಅನ್ನು ಟಿಪ್ಪು ಸುಲ್ತಾನ್ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಅವಧಿಯಲ್ಲಿ ನಿರ್ಮಾಣ ಮಾಡಿದ್ದನೆಂದು ಐತಿಹಾಸಿಕ ದಾಖಲೆ ಇದೆ. ಟಿಪ್ಪು ಡ್ರಾಪ್ ಭೂ ಮಟ್ಟದಿಂದ 2 ಸಾವಿರ ಅಡಿ ಮೇಲೆ ನಿರ್ಮಾಣ ಮಾಡಿದ್ದು, ಇದೀಗ ಟಿಪ್ಪು ಡ್ರಾಪ್ ದುರಸ್ತಿ ಕಾರ್ಯ ಮುಗಿದಿದ್ದು, ಪ್ರವಾಸಿಗರು ಅತ್ಯಧಿಕ ಸಂಖ್ಯೆಯಲ್ಲಿ ಟಿಪ್ಪು ಡ್ರಾಪ್ ವೀಕ್ಷಣೆ ಮಾಡುತ್ತಾರೆ.

Leave a Comment