ಅದ್ದೂರಿಯಾಗಿ ನಡೆದ ದಂಡಿದುರ್ಗಮ್ಮ ಜಾತ್ರೆ

ಹರಪನಹಳ್ಳಿ, ಜ. 6 – ಪ್ರತಿವರ್ಷದಂತೆ ಈ ವರ್ಷವು ಸಹ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಅರಸಿಕೆರೆ ಗ್ರಾಮದಲ್ಲಿ ದಂಡಿದುರ್ಗಮ್ಮ ಜಾತ್ರೆ ಅದ್ದೂರಿಯಾಗಿ ಇಂದು ನೆರವೇರಿತು. ಪ್ರತಿವರ್ಷವು ಇದೇ ಸಮಯಕ್ಕೆ ಗ್ರಾಮ ದೇವತೆ ದಂಡಿ ದುರ್ಗಮ್ಮ ದೇವಿಯ ಜಾತ್ರೆ ನಡೆಯುತ್ತಿದ್ದು, ನಸುಕಿನ ಜಾವದಿಂದ ದೇವತೆಗೆ ಹೊಳೆ ಪೂಜೆ ಸಲ್ಲಿಸಲಾಗುತ್ತದೆ. ದೇವಿಯ ಪೂಜೆ ಮಾಡುವುದು ದಲಿತರಾಗಿರುವುದೇ ಈ ಜಾತ್ರೆಯ ವಿಶೇಷವಾಗಿದೆ. ದಲಿತ ಪೂಜಾರಿ ದುರ್ಗದಯ್ಯ ದೇವಿಗೆ ಪೂಜೆ ಸಲ್ಲಿಸಿ ಕಳಸ ಹೊತ್ತು ಸಾಗುವಾಗ ಸಾವಿರಾರು ಭಕ್ತರು ರಸ್ತೆಯಲ್ಲಿ ಮಲಗಿರುತ್ತಾರೆ. ದಲಿತ ಪೂಜಾರಿ ದುರ್ಗದಯ್ಯ ರಸ್ತೆಯಲ್ಲಿ ಮಲಗಿದ್ದ ಭಕ್ತರ ಮೇಲೆ ನಡಿಗೆ ಆರಂಭಿಸುತ್ತಾರೆ. ಕಳಸ ಹೊತ್ತ ಪೂಜರಿ ಯಾರ ಮೇಲೆ ಕಾಲು ಇಡುತ್ತಾರೋ ಅವರಿಗೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂದು ನಂಬಿಕೆ ಇತ್ತು. ಹೊಳೆ ಪೂಜೆಯಿಂದ ದೇವಸ್ಥಾನದವರೆಗೂ ದಲಿತ ಪೂಜಾರಿ ಭಕ್ತರ ಮೇಲೆ ನಡಿಗೆ ಆರಂಭಿಸುತ್ತಾರೆ. ಮೊದಲೆಲ್ಲಾ ನಡಿಗೆ ಆರಂಭವಾದಾಗಿನಿಂದ ಹೆಜ್ಜೆ ಹೆಜ್ಜೆಗೂ ಪ್ರಾಣಿ ಬಳಿ ನೀಡುತ್ತಿದ್ದರು ಆದರೆ ಈಗ ಪೊಲೀಸರ ಬಿಗಿಭದ್ರತೆ ಹಾಗೂ ಪ್ರಾಣಿ ಬಲಿ ನಿಷೇಧ ಕಾಯ್ದೆ ಹಿನ್ನಲೆಯಲ್ಲಿ ಬಲಿ ಕೊಡುವುದು ಸಂಪೂರ್ಣ ನಿಂತಿದೆ. ಅದರಲ್ಲೂ ಭಕ್ತನೊಬ್ಬ ದೇವರಿಗೆ ಕೋಳಿಯನ್ನು ತೂರಿ ತನ್ನ ಭಕ್ತಿಯನ್ನು ಅರ್ಪಿಸಿದ್ದಾನೆ. ಇನ್ನು ಹೊಳೆ ಪೂಜೆ ನಂತರ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ಜರುಗಲಿದ್ದು, ದೇವಿಯ ದರ್ಶನಕ್ಕೆ ಸಾಲು ಸಾಲಾಗಿ ಭಕ್ತರು ನಿಂತು ದರ್ಶನ ಪಡೆದು ಪುನೀತರಾದರು.
ದಲಿತ ವ್ಯಕ್ತಿಯೇ ಇಲ್ಲಿನ ಭಕ್ತರ ಪಾಲಿಗೆ ಆರಾಧ್ಯ ದೇವರು. ಈ ವ್ಯಕ್ತಿಯ ಮೇಲೆ ದೇವರು ಬರುತ್ತದೆ ಎಂಬುದು ಭಕ್ತರ ನಂಬಿಕೆ. ಹೊಳೆ ಪೂಜೆಗೆ ಹೋದ ವೇಳೆ ಅಲ್ಲಿಂದ ಸುಮಾರು 2 ಕಿಲೋ ಮೀಟರ್ ದೂರ ಭಕ್ತರು ಸಾಲಾಗಿ ಮಲಗುತ್ತಾರೆ. ಈ ವೇಳೆ ದೇವ ಮಾನವ ದಲಿತ ವ್ಯಕ್ತಿ ಮಲಗಿದ್ದ ಭಕ್ತರ ಬೆನ್ನ ಮೇಲೆ ಕಾಲಿಟ್ಟು ನಡೆದುಕೊಂಡು ಬರುತ್ತಾನೆ. ಈ ರೀತಿ ಹರಕೆ ತೀರಿಸಿದರೆ ಸಂಕಷ್ಟ ನಿವಾರಣೆಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಮರಿಯಪ್ಪ
ದೇವಸ್ಥಾನ ಸಮಿತಿಯ ಮುಖಂಡ
ಈ ಜಾತ್ರೆ ಮತ್ತೊಂದು ವಿಶೇಷ ಎಂದರೆ ಕಳೆದ ನಾಲ್ಕು ವರ್ಷದಿಂದ ಹೊಸ ಇತಿಹಾಸ ಸೃಷ್ಟಿ ಮಾಡಿ ಹಬ್ಬ ಆಚರಿಸಲಾಗುತ್ತಿದೆ. ಜಾತ್ರೆಯಲ್ಲಿ ಸಾವಿರಾರು ಕುರಿಗಳನ್ನು ಬಲಿ ಕೊಟ್ಟು ಮಾರಣ ಹೋಮ ಮಾಡಲಾಗುತ್ತಿತ್ತು. ಆದರೆ ನಾಲ್ಕು ವರ್ಷದಿಂದ ಕುರಿ ಬಲಿ ನೀಡದೆ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಈ ಮೂಲಕ ಮೂಡನಂಬಿಕೆ ಭಕ್ತರು ಸ್ವಲ್ಪ ದೂರ ಉಳಿದಿದ್ದಾರೆ. ಈಬಾರಿಯೂ ಸಾರ್ವಜನಿಕವಾಗಿ ಜಾತ್ರೆಯಲ್ಲಿ ಪ್ರಾಣಿಬಲಿ ಇಲ್ಲದೆ ವಿಶಿಷ್ಟವಾಗಿ ಆಚರಿಸಲಾಗುತ್ತದೆ ಎಂದರು.
ಉಮಾದೇವಿ
ಭಕ್ತರು

Leave a Comment