ಅತ್ಯಾಚಾರ ಸಂತ್ರಸ್ತ್ತ ಅಪ್ರಾಪ್ತೆಗೆ 90 ಲಕ್ಷ ಪರಿಹಾರ

ಚಂಡೀಗಡ, ಸೆ.೧೨: ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಸಂತ್ರಸ್ತ ಹಾಗೂ ಆಕೆಯ ಪೋಷಕರಿಗೆ ಅಪರಾಧಿಗಳು ೯೦ ಲಕ್ಷ ರೂ. ಪರಿಹಾರ ನೀಡಬೇಕೆಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರ್ದೇಶನ ನೀಡಿದೆ.

೨೦೧೨ರಲ್ಲಿ ಫರೀದ್‌ಕೋಟ್‌ನಿಂದ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಅಪರಾಧಿ ನಿಶಾನ್ ಸಿಂಗ್ ಹಾಗೂ ಆತನ ತಾಯಿ ನವಜೋತ್ ಕೌರ್‌ಗೆ ನ್ಯಾಯಾಲಯ ಈ ಆದೇಶ ನೀಡಿದೆ. ಅತ್ಯಾಚಾರ ಪ್ರಕರಣವೊಂದರಲ್ಲಿ ಇಷ್ಟು ಬೃಹತ್ ಪ್ರಮಾಣದ ಪರಿಹಾರ ನೀಡಲು ಆದೇಶಿಸಿರುವುದು ಹೈಕೋರ್ಟ್ ಇತಿಹಾಸದಲ್ಲೇ ಇದು ಪ್ರಥಮವಾಗಿದೆ.

ಇತರ ೮ ಮಂದಿ ಸಹಚರರೊಂದಿಗೆ ನಿಶಾನ್ ಹಾಗೂ ಆತನ ತಾಯಿ ಈ ಅಪಹರಣ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಸೆಷೆನ್ಸ್ ಕೋರ್ಟಿನಿಂದ ೨೦೧೩ರಲ್ಲಿ ಶಿಕ್ಷೆಗೆ ಒಳಗಾಗಿದ್ದು, ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಎ.ಬಿ. ಚೌಧರಿಹಾಗೂ ಇಂದ್ರಜಿತ್ ಸಿಂಗ್ ಅವರುಗಳು ಸಂತ್ರಸ್ಥೆಯ ಪೋಷಕರ ಮನವಿ ಮೇರೆಗೆ ಈ ಆದೇಶ ನೀಡಿದ್ದಾರೆ.

ಅಪರಾಧಿಗಳು ಇನ್ನು ೧೦ ವಾರಗಳ ಒಳಗೆ ಈ ಪರಿಹಾರ ಪಾವತಿಸುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ನಿಶಾನ್ ಹಾಗೂ ಆತನ ತಾಯಿಗೆ ಸೇರಿದ ಆಸ್ತಿಪಾಸ್ತಿಗಳನ್ನು ಜಫ್ತಿ ಮಾಡಿಕೊಳ್ಳಬೇಕೆಂದು ಸಹ ನ್ಯಾಯಪೀಠವು ಫರೀದ್‌ಕೋಟ್ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ. ಪರಿಹಾರದ ಮೊತ್ತ ರೂ. ೯೦ ಲಕ್ಷದಲ್ಲಿ ಸಂತ್ರಸ್ಥೆಗೆ ೫೦ ಲಕ್ಷ ರೂ. ಹಾಗೂ ತಲಾ ೨೦ ಲಕ್ಷ ರೂ. ಆಕೆಯ ತಂದೆ-ತಾಯಿಗೆ ಹಂಚಿಕೆ ಮಾಡಬೇಕೆಂದು ನ್ಯಾಯಪೀಠ ತಾಕೀತು ಮಾಡಿದೆ.

“ಇಬ್ಬರು ಪುತ್ರಿಯರನ್ನು ಹೊಂದಿರುವ ಮಧ್ಯಮ ವರ್ಗದ ದೂರುದಾರ ಕುಟುಂಬವೊಂದು ನಗರದ ಶ್ರೀಮಂತ ಭೂಮಾಲೀಕ ನಿಶಾಂನ್ ಸಿಂಗ್ ಹಾಗೂ ಆತನ ತಾಯಿಯ ಗೂಂಡಾಗಿರಿ ಹಾಗೂ ಕ್ರೂರತನದಿಂದ ಹೇಗೆ ದೌರ್ಜನ್ಯಕ್ಕೆ ಒಳಗಾಯಿತೆಂದು ಕಂಡು ನಮಗೇ ಗಾಬರಿಯಾಗಿದೆ; ಸಂತ್ರಸ್ಥೆಯ ಗರ್ಭಪಾತ ಮಾಡುವ ಅಗತ್ಯವಿದೆ. ಈ ವಾಸ್ತವ ವಿಷಯ ಫರೀದ್‌ಕೋಟ್ ನಗರದ ಎಲ್ಲರಿಗೂ ಹಾಗೂ ಸಂತ್ರಸ್ಥೆಯ ತಂದೆಯ ಸಮುದಾಯದವರಿಗೂ ತಿಳಿಯಬೇಕು…” ಎಂದು ಪೀಠ ಹೇಳಿದೆ.

Leave a Comment