ಅತ್ಯಾಚಾರ ಸಂತ್ರಸ್ತೆ ತಾಯಿಯ ಥಳಿಸಿ ಹತ್ಯೆ!

ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿಗಳಿಂದ ಕೃತ್ಯ

ಕಾನ್ಪುರ, ಜ.೧೮- ದೇಶದಲ್ಲಿ ಮತ್ತೊಂದು ಘೋರ ಪಾತಕ ಕೃತ್ಯ ನಡೆದಿದ್ದು, ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿಯ ತಾಯಿಯನ್ನು ಆರೋಪಿಗಳು ಸಾರ್ವಜನಿಕರ ಎದುರಲ್ಲೇ ಹಾಡಹಗಲೇ ಥಳಿಸಿ ಹತ್ಯೆಗೈದಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿಗಳು ಸಂತ್ರಸ್ತೆಯ ತಾಯಿಗೆ ಮನಬಂದಂತೆ ಥಳಿಸಿದ್ದರಿಂದ ಆಕೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕಾನ್ಪುರದಲ್ಲಿ ನಡೆದಿದೆ.

ಘಟನೆಯ ವಿವರ:

೨೦೧೮ರಲ್ಲಿ ೧೩ರ ಹರೆಯದ ಬಾಲಕಿಯ ಮೇಲೆ ಅಬಿದ್, ಮಿಂಟು, ಮಹಬೂಬ್, ಚಾಂದ್ ಬಾಬು, ಜಮೀಲ್ ಮತ್ತು ಫಿರೋಜ್ ಎಂಬ ಆರು ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಆರೋಪಿಗಳ ಪೈಕಿ ನಾಲ್ವರನ್ನು ಪೊಲೀಸರು ೨೦೧೮ರಲ್ಲಿ ಬಂಧಿಸಿ ಜೈಲಿಗಟ್ಟಿದ್ದರು. ಈ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಅಪ್ರಾಪ್ತ ವಯಸ್ಸಿನ ಬಾಲಕಿಯ ಮನೆಗೆ ನುಗ್ಗಿದ ಆರೋಪಿಗಳು ಪ್ರಕರಣ ಹಿಂದಕ್ಕೆ ಪಡೆದುಕೊಳ್ಳುವಂತೆ ಕುಟುಂಬಕ್ಕೆ ಆಗ್ರಹಿಸಿದ್ದಾರೆ. ಅದಕ್ಕೆ ಅವರು ಒಪ್ಪದಿದ್ದಾಗ ತಾಯಿ ಮತ್ತು ಸಂಬಂಧಿಯ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡ ಬಾಲಕಿಯ ತಾಯಿ ಹಾಗೂ ಮತ್ತೊಬ್ಬ ಸಂಬಂಧಿ ಮಹಿಳೆಯನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಯ ತಾಯಿ ನಿನ್ನೆ ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನೆಯ ಎರಡು ಸಣ್ಣ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕುಟುಂಬ ವಾಸವಿದ್ದ ಮನೆಯ ಮಹಡಿಯಿಂದ ತೆಗೆಯಲಾದ ಐದು ಸೆಕೆಂಡುಗಳ ವಿಡಿಯೋದಲ್ಲಿ ಕೆಂಪು ಕುರ್ತಾ ಧರಿಸಿದ ಮಹಿಳೆಯೊಬ್ಬರು ನೆಲದ ಮೇಲೆ ಬಿದ್ದಿದ್ದು ಸುತ್ತಲೂ ಬಿಳಿಬಣ್ಣದ ಕುರ್ತಾ ಧರಿಸಿ ನಿಂತಿದ್ದ ವ್ಯಕ್ತಿಗಳು ಹಲ್ಲೆಗೈಯುವ ದೃಶ್ಯ ಸೆರೆಯಾಗಿದೆ. ಘಟನೆಯಲ್ಲಿ ಬಾಲಕಿಯ ತಾಯಿ ಮತ್ತು ಜಜ್ಮುವಾ ಪ್ರದೇಶದ ಬಿಜೆಪಿ ನಾಯಕಿಯಾಗಿರುವ ಚಿಕ್ಕಮ್ಮ ಇಬ್ಬರೂ ಗಾಯಗೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೆ ತಾಯಿ ಕೊನೆಯುಸಿರೆಳೆದಿದ್ದಾರೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಇನ್ನು ಮೂವರು ಆರೋಪಿಗಳಿಗೆ ಹುಡುಕಾಟ ನಡೆಯುತ್ತಿದೆ ಎಂದು ಕಾನ್ಪುರ ಪೊಲೀಸರು ತಿಳಿಸಿದ್ದಾರೆ. ೨೦೧೮ರಲ್ಲಿ ಬಾಲಕಿಯ ಮೇಲೆ ಆರು ಮಂದಿ ಅತ್ಯಾಚಾರಗೈದಿದ್ದರು. ಇದಕ್ಕೆ ಬಾಲಕಿಯ ತಂಗಿ ಸಾಕ್ಷಿಯಾಗಿದ್ದಳು. ನಾಲ್ವರು ಆರೋಪಿಗಳ ವಿರುದ್ಧ ಸೆಕ್ಷನ್ ೩೫೪ಸಿ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದರು.

Leave a Comment