ಅತ್ಯಾಚಾರ ಆರೋಪಿಗೆ ಕಠಿಣ ಶಿಕ್ಷೆ

ಹುಬ್ಬಳ್ಳಿ, ಡಿ 7: ಅಪ್ರಾಪ್ತ ಬಾಲಕಿಯೋರ್ವಳನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪಿಗೆ ನ್ಯಾಯಾಲಯ  ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.
ನಗರದ ಕೇಶ್ವಾಪುರ ನಾಗಶೆಟ್ಟಿಕೊಪ್ಪ, ಕೆರಿ ಓಣಿ ನಿವಾಸಿ ಆರೋಪಿ ಟಿಪ್ಪು ಸುಲ್ತಾನ ರಾಜೇಸಾಬ ಬೇಪಾರಿ ಈತನಿಗೆ ಇಲ್ಲಿನ 2ನೇ ಅಧಿಕ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಘಟನೆ ವಿವರ:
ಟಿಪ್ಪು ಸುಲ್ತಾನ ಬೇಪಾರಿ, ನಗರದ ರಾಜ ನಗರ ಛಡ್ಡಾ ಐ.ಟಿ.ಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೋರ್ವಳನ್ನು ದಿ. 27.11.2015 ರಂದು ಯಾವುದೋ ದುರುದ್ದೇಶದಿಂದ ಕಾಲೇಜಿನಿಂದ ಅಪಹರಿಸಿದ್ದು, ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 363 ನೇದ್ದರಡಿ ಪ್ರಕರಣ ದಾಖಲಾಗಿತ್ತು.
ನಂತರ ದಿ. 30.11.2015 ರಂದು ಆರೋಪಿ ಟಿಪ್ಪು ಸುಲ್ತಾನ ಈತನನ್ನು ಪೊಲೀಸರು ಬಂಧಿಸಿದ್ದು, ಪೊಲೀಸ್ ಅಧಿಕಾರಿಗಳು ತನಿಖೆ ಮಾಡಲಾಗಿ ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಲೈಂಗಿಕ ಅತ್ಯಾಚಾರ ಮಾಡಿದ್ದಾನೆಂದು ತಿಳಿದು ಬಂದಿದ್ದು, ನಂತರ ಆರೋಪಿಯ ಮೇಲೆ ಐಪಿಸಿ ಕಲಂ 366, 376(1), 201  ಮತ್ತು ಕಲಂ 6 ಪೋಕ್ಸೊ ಕಾಯ್ದೆ-2012 ನೇದ್ದರಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡಡೆಸಿದ 2ನೇ ಅಧಿಕ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿ ಟಿಪ್ಪು ಸುಲ್ತಾನ್ ಅಪರಾಧ ಸಾಬೀತಾಗಿದ್ದನ್ನು ಪರಿಗಣಿಸಿ ದಿ. 5.12.2018 ರಂದು ಈತನಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿ ಆದೇಶಿಸಿದೆ.

Leave a Comment