ಅತ್ಯಾಚಾರ ಆರೋಪಿಗಳನ್ನು ಉನ್ನಾವೊಕ್ಕೆ ಕರೆದೊಯ್ದ ಸಿಬಿಐ ಅಧಿಕಾರಿಗಳು

ಲಖನೌ, ಏ.೧೬- ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಶಾಸಕ ಕುಲ್ ದೀಪ್ ಸಿಂಗ್ ಸೆಂಗರ್ ಹಾಗೂ ಶಶಿಸಿಂಗ್ ಅವರನ್ನು ಇಂದು ಸಿಬಿಐ ತೀವ್ರ ವಿಚಾರಣೆಗೆ ಗುರಿಪಡಿಸಿದೆ.

ಸೆಂಗರ್ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಸಿಬಿಐ ನ್ಯಾಯಾಲಯದ ಅನುಮತಿ ಪಡೆಯಲು ಮುಂದಾಗಿದೆ.

ಜಮ್ಮುವಿನ ಕಟುವಾದಲ್ಲಿ ಹಾಗೂ ಇತರೆಡೆ ಅಪ್ರಾಪ್ತ ಬಾಲಕಿಯ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣದ ಬಗ್ಗೆ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಘಟನೆ ಖಂಡಿಸಿ ವ್ಯಾಪಕ ಪ್ರತಿಭಟನೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒಕ್ಕೊರಲ ಒತ್ತಾಯ ಕೇಳಿ ಬಂದಿದೆ.
ಇದರ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ನಡೆದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ, ಶಾಸಕ ಮತ್ತು ಈತನ ಸಹಚರ ಶಶಿಸಿಂಗ್ ಅವರನ್ನು ಘಟನಾ ಸ್ಥಳಕ್ಕೆ ಕೊಂಡೊಯ್ದು ಮಾಹಿತಿ ಸಂಗ್ರಹಿಸಲಿದೆ.
ಸೆಂಗರ್ ಸುಳ್ಳು ಪತ್ತೆ ಪರೀಕ್ಷೆಗೆ ಗುರಿ ಪಡಿಸಲು ನಿರ್ಧರಿಸಿರುವ ಸಿಬಿಐ, ಈ ಸಂಬಂಧ ಅನುಮತಿ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ. ಏಕೆಂದರೆ ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಶಾಸಕ ಸಿಬಿಐ ಕೇಳಿದ ಪ್ರಶ್ನೆಗಳಿಗೆ ಬೇರೆ ಬೇರೆ ರೀತಿಯಲ್ಲಿ ಉತ್ತರ ನೀಡುತ್ತಿರುವುದರಿಂದ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಗುರಿ ಪಡಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ಸಂತ್ರಸ್ತೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಅವರಿಗೆ ಪೊಲೀಸರು ಹಿಗ್ಗಾ ಮುಗ್ಗಾ ಥಳಿಸಿದ್ದರಿಂದ ಆತ ಮೃತ ಪಟ್ಟಿರುವುದು ಕೂಡ ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ಮುಂದೆ ಯಾವುದೇ ವಿಷಯವನ್ನು ಬಹಿರಂಗ ಪಡಿಸಲಾಗದು ಎಂದು ಉನಾವೋ ಗ್ರಾಮಸ್ಥರಿಗೆ ಶಾಸಕ ಬೆದರಿಕೆ ಹಾಕಿದ್ದಾರೆಂದು ಸಂತ್ರಸ್ಥ ಕುಟುಂಬ ಆರೋಪಿಸಿದೆ.

Leave a Comment