ಅತ್ಯಾಚಾರಿಗಳ ಕುಟುಂಬಕ್ಕೆ ಸಾಂತ್ವನ ಹೇಳಿದ ಕಾಂಗ್ರೆಸ್ ನಾಯಕಿ

ಮಂಗಳೂರು, ಏ.೧೬- ಜಮ್ಮ ಕಾಶ್ಮೀರದಲ್ಲಿ ನಡೆದ ಅತ್ಯಾಚಾರ ಪ್ರಕರಣದ ವಿರುದ್ಧ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮಹಿಳಾ ನಾಯಕಿಯೊಬ್ಬರು ಅತ್ಯಾಚಾರಿಗಳ ಕುಟುಂಬಕ್ಕೆ ಸಾಂತ್ವನ ಹೇಳಿ ಪ್ರತಿಭಟನಾ ಸಭೆಯಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಜಮ್ಮುವಿನ ಅತ್ಯಾಚಾರ ಘಟನೆ ಖಂಡಿಸಿ ಮಂಗಳೂರಿನ ಮಹತ್ಮಾ ಗಾಂಧಿ ಪ್ರತಿಮೆ ಎದುರು ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಆಯೋಜಿನಲಾಗಿತ್ತು. ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಮೇಣದ ಬತ್ತಿ ಉರಿಸಿ ಘಟನೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ಅವರು, ‘ದೇಶದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದ್ದು ಆತಂಕದಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ’ ಎಂದು ಕೇಂದ್ರ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಮಾತನಾಡುವ ಬರದಲ್ಲಿ ಎಡವಟ್ಟು ಮಾಡಿಕೊಂಡು ‘ಅತ್ಯಾಚಾರಿಗಳ ಕುಟುಂಬಕ್ಕೆ ಸಾಂತ್ವನ ಹೇಳುತ್ತೇವೆ, ಅವರ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ. ಇದಕ್ಕೆ ಎಲ್ಲಾ ಮಹಿಳೆಯರು ಧ್ವನಿಯಾಗಬೇಕು’ ಎಂದು ಹೇಳಿಕೆ ನೀಡಿಯೇ ಬಿಟ್ಟರು. ಶಾಲೆಟ್ ಪಿಂಟೋ ಅವರ ಈ ಹೇಳಿಕೆ ಈಗ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿವೆ.

Leave a Comment