ಅತ್ಯಾಚಾರಿಗಳಿಗೆ ಗಲ್ಲು: ಸಂಸತ್‌ನಲ್ಲಿ ಪಕ್ಷಬೇಧ ಮರೆತು ಸದಸ್ಯರ ಆಗ್ರಹ

ವೈದ್ಯೆ ರೆಡ್ಡಿ ಪ್ರಕರಣ ಪ್ರತಿಧ್ವನಿ ಎಲ್ಲೆಡೆ ಆಕ್ರೋಶ
ನವದೆಹಲಿ, ಡಿ. ೨- ಹೈದರಾಬಾದ್‌ನಲ್ಲಿ ಪಶು ವೈದ್ಯೆ ಪ್ರಿಯಾಂಕ ರೆಡ್ಡಿ ಅವರ ಮೇಲೆ ನಡೆಸಿದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಸತ್ತಿನ ಉಭಯ ಸದನಗಳಲ್ಲಿ ಇಂದು ಪ್ರತಿಧ್ವನಿಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಪಕ್ಷಬೇಧ ಮರೆತು ಸದಸ್ಯರು ಒಕ್ಕೊರಲಿನಿಂದ ಸರ್ಕಾರವನ್ನು ಆಗ್ರಹಿಸಿದ ಪ್ರಸಂಗ ನಡೆಯಿತು.

  • ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣ.
  •  ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ತಪ್ಪಿತಸ್ಥರನ್ನು ಗಲ್ಲಿಗೆ ಹಾಕಬೇಕೆಂಬ ಒತ್ತಾಯ.
  •  ಪಕ್ಷಬೇಧ ಮರೆತು ಸದಸ್ಯರು ಸರ್ಕಾರದ ವೈಫಲ್ಯಗಳ ವಿರುದ್ಧ ವಾಗ್ದಾಳಿ.
  •  ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದಲೂ ಸದಸ್ಯರ ಭಾವನೆಗಳಿಗೆ ಸ್ಪಂದನ.
  •  ರಾಜ್ಯಸಭೆಯಲ್ಲಿ ಮಹಿಳಾ ಸದಸ್ಯರಿಂದ ವಿಷಯ ಪ್ರಸ್ತಾಪ.
  •  ಲೋಕಸಭೆಯಲ್ಲೂ ಮಾರ್ದನಿಸಿದ ಪ್ರಕರಣ, ಚರ್ಚೆಗೆ ಸಭಾಧ್ಯಕ್ಷರಿಂದ ಅವಕಾಶದ ಭರವಸೆ.

ಉಭಯ ಸದನಗಳಲ್ಲಿ ಮಹಿಳಾ ಸದಸ್ಯರೂ ಸೇರಿದಂತೆ, ಪಕ್ಷಬೇಧ ಮರೆತು ತಪ್ಪಿತಸ್ಥರನ್ನು ಸಾರ್ವಜನಿಕವಾಗಿ ಶಿಕ್ಷೆಗೆ ಗುರಿಪಡಿಸಬೇಕು. ಇಂತಹ ಅಕೃತ್ಯಗಳು ಮರುಕಳಿಸದಂತೆ ಸರ್ಕಾರ ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕೆಂದು ಒತ್ತಾಯಿಸಿದರು.

ರಾಜ್ಯಸಭೆಯ ಕಲಾಪ ಇಂದು ಬೆಳಿಗ್ಗೆ ಆರಂಭವಾಗುತ್ತಿದ್ದಂತೆ, ಸಮಾಜವಾದಿ ಪಕ್ಷದ ಜಯಾಬಚ್ಚನ್, ಎಐಎಡಿಎಂಕೆ ವಿಜಿಲಾ ಸತ್ಯನಾಥ್, ಮುಂತಾದವರು ವಿಷಯ ಪ್ರಸ್ತಾಪಿಸಿ ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಹೈದರಾಬಾದ್‌ನಲ್ಲಿ ನಡೆದಂತಹ ಪಶು ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಕಾರಣರಾದ ತಪ್ಪಿತಸ್ಥರನ್ನು ನೇಣಿಗೆ ಹಾಕಬೇಕೆಂದು ಆಗ್ರಹಿಸಿದರು.

ಕಳೆದ ಬುಧವಾರ ರಾತ್ರಿ ಹೈದರಾಬಾದ್‌ನಲ್ಲಿ 26 ವರ್ಷದ ಪಶು ವೈದ್ಯೆ ಮೇಲೆ ದುಷ್ಕರ್ಮಿಗಳು ಅತ್ಯಾಚಾರವೆಸಗಿ, ಕೊಲೆ ಮಾಡಲಾಗಿತ್ತು. ಈ ಘಟನೆ ಪ್ರತಿಭಟಿಸಿ ತೆಲಂಗಾಣ ಸೇರಿದಂತೆ, ದೇಶಾದ್ಯಂತ ಮಹಿಳಾ ಸಂಘಟನೆಗಳು ತೀವ್ರ ಹೋರಾಟ ನಡೆಸಿದ್ದವು. ಈ ವಿಷಯವನ್ನು ಪ್ರಸ್ತಾಪಿಸಿದ ಸದಸ್ಯರು ಇಂತಹ ಅಕೃತ್ಯಗಳನ್ನು ತಡೆಯಲು ಕಾನೂನು ತಂದರೆ ಸಾಲದು, ಸರ್ಕಾರ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಹಿರಿಯ ಸದಸ್ಯ ಗುಲಾಂ ನಬಿ ಅಜಾದ್, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆಯದಂತೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹೈದರಾಬಾದ್ ಘಟನೆ ಬಗ್ಗೆ ಪ್ರಸ್ತಾಪಿಸಿದ ಉಪರಾಷ್ಟ್ರಪತಿಯೂ ಆಗಿರುವ ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು, ಇಂತಹ ಘಟನೆಗಳು ಸಮಾಜದಲ್ಲಿ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ, ನಾವೆಲ್ಲರೂ ತಲೆತಗ್ಗಿಸಬೇಕಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ, ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಿದ್ದು, ಸದಸ್ಯರು ಸೂಕ್ತ ಸಲಹೆ – ಸೂಚನೆಗಳನ್ನು ನೀಡಬೇಕೆಂದು ಹೇಳಿದರು.

ಲೋಕಸಭೆಯಲ್ಲೂ ಪ್ರಸ್ತಾಪ
ಲೋಕಸಭೆಯಲ್ಲೂ ಪ್ರತಿಪಕ್ಷಗಳ ಸದಸ್ಯರೂ ಸೇರಿದಂತೆ, ವಿವಿಧ ಪಕ್ಷಗಳ ಸದಸ್ಯರು, ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ, ಕೊಲೆ ಪ್ರಕರಣಗಳ ಕುರಿತು, ಏರಿದ ದನಿಯಲ್ಲಿ ಪ್ರಸ್ತಾಪಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯರು ಈ ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಭಾಧ್ಯಕ್ಷ ಓಂ ಬಿರ್ಲಾ, ಈ ಘಟನೆ ಬಗ್ಗೆ ಸದನಕ್ಕೆ ಕಳಕಳಿ ಇದೆ. ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಲು ಅವಕಾಶ ಮಾಡಿಕೊಡುವುದಾಗಿ ಹೇಳಿ, ಪ್ರಶ್ನೋತ್ತರ ಕಲಾಪಕ್ಕೆ ಅನುವು ಮಾಡಿಕೊಟ್ಟರು.

ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ತಮಿಳುನಾಡು ಕೊಯಮತ್ತೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸಿದ ಆ ರಾಜ್ಯದ ಸದಸ್ಯರು, ಅಪ್ರಾಪ್ತ ಬಾಲಕಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ದಿನವೇ ಇಂತಹ ಕೃತ್ಯ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲಿ ಇಂತಹ ಘಟನೆಗಳು ಪದೇಪದೇ ಮರುಕಳಿಸುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಡಿಎಂಕೆಯ ಹಿರಿಯ ಸದಸ್ಯ ಟಿ.ಆರ್. ಬಾಲು ಒತ್ತಾಯಿಸಿದರು.

ಲೋಕಸಭೆಯಲ್ಲಿ ನಡೆದ ಚರ್ಚೆಯ ನಡುವೆ ಎದ್ದುನಿಂತ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನೊಂದನ್ನು ರೂಪಿಸಲು ಸರ್ಕಾರ ಸಿದ್ಧವಿದೆ. ಸದಸ್ಯರು ಬಯಸಿದಲ್ಲಿ ಹೊಸಕಾನೂನನ್ನು ರಚಿಸಲು ತಯಾರಿದ್ದೇವೆಂದು ಹೇಳಿದರು.

 

Leave a Comment