ಅತೃಪ್ತ ಕೈ ಶಾಸಕರ ನಡೆ ನಿಗೂಢ

ಬೆಂಗಳೂರು, ಜ. ೧೧- ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕದ ನಂತರ ಅಸಮಾಧಾನಗೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಕೆಲ ಕಾಂಗ್ರೆಸ್ ಶಾಸಕರು ಇದುವರೆಗೂ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದಿರುವುದು ಕಾಂಗ್ರೆಸ್ ವಲಯದಲ್ಲಿ ತಳಮಳಕ್ಕೆ ಎಡೆಮಾಡಿದೆ.
ಸಚಿವ ಸಂಪುಟದಿಂದ ಕೈಬಿಟ್ಟ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜತೆ ಗುರುತಿಸಿಕೊಂಡಿದ್ದ ಬೆಳಗಾವಿಯ ಮೂವರು ಶಾಸಕರು ಹಾಗೂ ರಾಯಚೂರಿನ ಇಬ್ಬರು ಕೈ ಶಾಸಕರು ಮತ್ತು ಬಳ್ಳಾರಿಯ ಕಾಂಗ್ರೆಸ್‌ನ ನಾಗೇಂದ್ರ ಮತ್ತು ಆನಂದ್‌ಸಿಂಗ್ ಇವರುಗಳೆಲ್ಲಾ ಒಟ್ಟಾಗಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿದ್ದಾರೆ. ಇದರ ಲಾಭ ಪಡೆಯಲು ಬಿಜೆಪಿ ಕಾರ್ಯೋನ್ಮುಖವಾಗಿದೆ.
ಮುನಿಸಿಕೊಂಡಿರವ ಈ ಶಾಸಕರನ್ನು ಕರೆಸಿ ಸಮಾಧಾನಪಡಿಸಲು ಕಾಂಗ್ರೆಸ್ ನಾಯಕರು ನಡೆಸಿದ ಪ್ರಯತ್ನಗಳು ಸಫಲವಾಗಿಲ್ಲ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್‌ನ 7-8 ಶಾಸಕರು ಯಾರ ಸಂಪರ್ಕಕಕ್ಕೂ ಬಾರದೆ ಎಲ್ಲ ಚಟುವಟಿಕೆಗಳಿಂದ ದೂರು ಉಳಿಸಿದ್ದಾರೆ. ಕಾಂಗ್ರೆಸ್‌ನ ಅತಪ್ತ ಶಾಸಕರ ಈ ನಡೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಆತಂಕ ಸೃಷ್ಟಿಸಿದೆ. ಈ ಅತೃಪ್ತ ಶಾಸಕರು ಬಿಜೆಪಿ ಜತೆ ಸಂಪರ್ಕದಲ್ಲಿದ್ದಾರೆ ಎಂಬ ಅನುಮಾನಗಳು ಮೂಡಿವೆ.
ಸಂಕ್ರಾಂತಿ ವೇಳೆಗೆ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳಾಗಬಹುದು ಎಂಬ ಸುದ್ದಿಗಳು ಹರಿದಾಡುತ್ತಿರುವಾಗಲೇ ಕಾಂಗ್ರೆಸ್‌ನ ಅತೃಪ್ತ ಶಾಸಕರು ಯಾರ ಸಂಪರ್ಕಕ್ಕೂ ಸಿಗದೆ ಇರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಇವರೆಲ್ಲಾ ಬಿಜೆಪಿ ಸಂಪರ್ಕದಲ್ಲಿದ್ದರಾ ಎಂಬ ಅನುಮಾನಗಳು ಮೂಡಿವೆ.
ಗರಿಗೆದರಿದ ಬಳ್ಳಾರಿ ರಾಜಕಾರಣ
ಬೆಳಗಾವಿ ರಾಜಕಾರಣ ತಣ್ಣಗಾಗುತ್ತಿದ್ದಂತೆ ಬಳ್ಳಾರಿ ರಾಜಕಾರಣ ಮುನ್ನೆಲೆಗೆ ಬಂದಿದೆ. ಸಂಪುಟ ವಿಸ್ತರಣೆ ನಂತರ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಬಳ್ಳಾರಿ ಶಾಸಕ ನಾಗೇಂದ್ರ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿದ್ದ ಅವರು ನಿನ್ನೆ ಹಠಾತ್ತನೆ ಬೆಂಗಳೂರಿಗೆ ಆಗಮಿಸಿದ್ದರಾದರೂ ಯಾವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಾಗೇಂದ್ರ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಶಾಸಕ ನಾಗೇಂದ್ರ ಬದಲು ಬಳ್ಳಾರಿ ಜಿಲ್ಲೆಯಿಂದ ಸಂಡೂರ ಕೈ ಶಾಸಕ ತುಕಾರಾಂ ಅವರಿಗೆ ಸಚಿವ ಪಟ್ಟ ಒಲಿದಿತ್ತು. ಇದರಿಂದ ನಾಗೇಂದ್ರ ಅಸಮಾಧಾನಗೊಂಡಿದ್ದರು.
ಸಚಿವ ಸಂಪುಟ ವಿಸ್ತರಣೆಯಾದ ನಂತರ ನಾಗೇಂದ್ರ ಅವರು ಕಾಂಗ್ರೆಸ್ ನಾಯಕರ ಕೈಗೆ ಸಿಕ್ಕಿರಲಿಲ್ಲ. ಅವರನ್ನು ಸಂಪರ್ಕಿಸಿ ಸಮಾಧಾನಪಡಿಸುವ ಪ್ರಯತ್ನವನ್ನೂ ರಾಜ್ಯಕಾಂಗ್ರೆಸ್ ನಾಯಕರು ನಡೆಸಿದ್ದಾರದರೂ ಅದು ಸಫಲವಾಗಿರಲಿಲ್ಲ.
ನಾಗೇಂದ್ರ ಕಳೆದ 2 ದಿನಗಳಿಂದ ದೆಹಲಿಯಲ್ಲಿದ್ದರು. ನಿನ್ನೆ ಹಠಾತ್ತನೆ ಬೆಂಗಳೂರಿಗೆ ವಾಪಸ್ಸಾಗಿದ್ದರು.
ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಮಂಡಳಿ ಸಭೆ ನಾಳೆ ಮತ್ತು ನಾಡಿದ್ದು ನಡೆಯಲಿದ್ದು, ಮತ್ತೆ ನಾಗೇಂದ್ರ ಅವರು 2 ದಿನ ಬಿಟ್ಟು ದೆಹಲಿಗೆ ತೆರಳುವರು ಎಂದು ಹೇಳಲಾಗುತ್ತಿದೆ.
ಸಂಪುಟ ವಿಸ್ತರಣೆ ನಂತರ ಒಂದು ವಾರದಲ್ಲಿ ಮುಂದಿನ ರಾಜಕೀಯ ನಡೆ ಪ್ರಕಟಿಸುವುದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದರಾದರೂ ಅವರು ಯಾವುದೇ ತೀರ್ಮಾನ ಮಾಡದೆ ಮೌನಕ್ಕೆ ಶರಣಾಗಿದ್ದರು. ಹಾಗಾಗಿ, ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಆಸ್ಫೋಟಗಳಾಗುತ್ತವೆ ಎಂಬುದು ಹುಸಿಯಾಗಿತ್ತು. ಆದರೆ, ಈಗ ಶಾಸಕ ನಾಗೇಂದ್ರ ಅವರ ಚಟುವಟಿಕೆಗಳು ಬಳ್ಳಾರಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯ ನಿನ್ನೆ ತಾನೆ ಶಾಸಕ ನಾಗೇಂದ್ರ ಮತ್ತು ಆನಂದ್ ಸಿಂಗ್ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿವೆ.
ಒಂದೆಡೆ ಕಾಂಗ್ರೆ‌ಸ್‌ನ ಅತೃಪ್ತ ಶಾಸಕರು ತಮ್ಮದೇ ಆದ ರಾಜಕೀಯ ನಡೆಯ ಬಗ್ಗೆ ತೀರ್ಮಾನ ಮಾಡುತ್ತಿದ್ದರೆ, ಮತ್ತೊಂದೆಡೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.
ಬಿಜೆಪಿಯ ಎಲ್ಲ ಶಾಸಕರು ಒಟ್ಟಾಗಿ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಇಂದು ಮತ್ತು ನಾಳೆ ದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯ ಎಲ್ಲ 104 ಶಾಸಕರು ದೆಹಲಿಯಲ್ಲಿ ಉಳಿದಿದ್ದಾರೆ.
ರಾಷ್ಟ್ರೀಯ ಮಂಡಳಿಯ ಸಭೆಯ ನಂತರ ಇದೇ ಭಾನುವಾರ ಅಂದರೆ ಜ. 13 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರದಾನಿ ನರೇಂದ್ರಮೋದಿ ಅವರು ರಾಜ್ಯ ಬಿಜೆಪಿಯ ಶಾಸಕರ ಜತೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
ಮುಂಬರುವ ಲೋಕಸಭಾಚುನಾವಣೆ ಸಿದ್ಧತೆಗಳ ಬಗ್ಗೆ ಹಾಗೂ ಒಂದು ವೇಳೆ ಅತೃಪ್ತ ಕಾಂಗ್ರೆಸ್ ಶಾಸಕರು ಬಿಜೆಪಿ ಜತೆ ಬರುವ ತೀರ್ಮಾನ ಕೈಗೊಂಡರೆ ಮುಂದಿನ ರಾಜಕೀಯ ನಡೆ ಏನಾಗಿರಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚೆಗಳು ನಡೆಯುವ ಸಾಧ್ಯತೆಗಳಿವೆ.
ಲೋಕಸಭಾ ಚುನಾವಣೆಯ ಸಿದ್ಧತೆಗಳು ಹಾಗೂ ಕಾರ್ಯತಂತ್ರಗಳ ಬಗ್ಗೆ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಚರ್ಚೆಗಳು ಆಗಲಿದ್ದು, ಪ್ರತಿಯೊಬ್ಬ ಶಾಸಕರಿಗೂ ಕೆಲ ನಿರ್ದಿಷ್ಠ ಜವಾಬ್ದಾರಿ ನೀಡುವ ಬಗ್ಗೆಯೂ ಚರ್ಚೆಗಳು ನಡೆಯಲಿವೆ ಎಂದು ಪಕ್ಷದ ಮೂಲಗಳು ಹೇಳಿವೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆಯಲಿರುವ 2 ದಿನಗಳ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಎಲ್ಲ 104 ಬಿಜೆಪಿ ಶಾಸಕರು ಈಗ ದೆಹಲಿಯಲ್ಲಿದ್ದಾರೆ.

Leave a Comment