ಅತೃಪ್ತರ ರಾಜೀನಾಮೆ ತಿರಸ್ಕಾರ ಖಚಿತ! : ರಾಯರೆಡ್ಡಿ

ಹುಬ್ಬಳ್ಳಿ, ಜು 12: ಮೈತ್ರಿ ಸರ್ಕಾರದ ಅತೃಪ್ತ ಶಾಸಕರು ನೀಡಿರುವ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷರು ಅಂಗೀಕಾರ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ರಾಜೀನಾಮೆ ಕೊಟ್ಟಂತಹ ಶಾಸಕರು ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದಾರೆ ಎಂಬುದನ್ನು ಕುಲಂಕುಷವಾಗಿ ವಿಚಾರಿಸಿ ರಾಜಿನಾಮೆಯನ್ನು ಸ್ಪೀಕರ್ ಅವರು ಅಂಗೀಕರಿಸಬೇಕಾಗುತ್ತದೆ. ಆದರೆ ಈಗಾಗಲೆ ಶಾಸಕರು ರಾಜೀನಾಮೆಗೆ ನೀಡಿದಂತಹ ಕಾರಣ, ಹಾಗೂ ಉದ್ದೇಶಗಳು ರಾಜೀನಾಮೆಗೆ ಸೂಕ್ತವಾಗಿಲ್ಲ. ಆದ್ದರಿಂದ ಸ್ಪೀಕರ್ ಅವರು ರಾಜೀನಾಮೆಯನ್ನು ಸಂಪೂರ್ಣವಾಗಿ ತಿರಸ್ಕರಿಸುವರು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಭಾಧ್ಯಕ್ಷರು ರಾಜೀನಾಮೆ ಅಂಗೀಕರಿಸುವ ವಿಷಯದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸಂವಿಧಾನ ಬದ್ಧವಾಗಿ ಕೈಗೊಳ್ಳುತ್ತಾರೆ. ಆದರೆ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ  ತನ್ನ ಅಧಿಕಾರವನ್ನು ಚಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಈಗಾಗಲೆ ರಾಜಿನಾಮೆ ನೀಡಿ ಮುಂಬೈನಲ್ಲಿ ಬೀಡುಬಿಟ್ಟಿರುವ ಶಾಸಕರಿಗೆ ಅಧಿವೇಶನಕ್ಕೆ ಹಾಜರಾಗಲು ಪಕ್ಷದಿಂದ ವಿಪ್ ಜಾರಿಮಾಡಲಾಗಿದ್ದು, ಪಕ್ಷ ಸಿದ್ದಾಂತಕ್ಕೆ ಮಣಿದು ಶಾಸಕರು ಸದನಕ್ಕೆ ಹಾಜರಾಗಲೇಬೇಕು. ಇಲ್ಲದಿದ್ದರೆ ಶಾಸಕರನ್ನು ಪಕ್ಷದಿಂದ ಅನರ್ಹತೆಗೊಳಿಸುವ ಸಾಧ್ಯತೆಗಳಿವೆ ಎಂದರು.
ಒಂದು ವೇಳೆ ಅತೃಪ್ತ ಶಾಸಕರು ಬರುವುದೇ ಇಲ್ಲ ಎಂದು ಪಟ್ಟು ಹಿಡಿದರೆ, ಕಾನೂನಾತ್ಮಕವಾಗಿ ಹೇಬಿಯಸ್ ಕಾರ್ಪಸ್ ಅರ್ಜಿ ಜಾರಿಮಾಡಲು ಪಕ್ಷ ಚಿಂತನೆ ನಡೆಸಿದೆ. ಆದ್ದರಿಂದ ಅತೃಪ್ತ ಶಾಸಕರು ಗೌರವಯುತವಾಗಿ ಮರಳಿ ಬರಬೇಕೆಂದರು.
ಮೈತ್ರಿ ಪಕ್ಷದ ಶಾಸಕರ ರಾಜೀನಾಮೆಗೆ ಬಿಜೆಪಿ ಷಡ್ಯಂತ್ರವೇ ಕಾರಣ ಎಂದ ಅವರು, ಅನೇಕ ರೀತಿಯ ವಾಮಮಾರ್ಗಗಳಿಂದ ಬಿಜೆಪಿಯ ನಾಯಕರು ನಮ್ಮ ಶಾಸಕರನ್ನು ಸೆಳೆಯುತ್ತಿದ್ದಾರೆ. ಹೇಗಾದರೂ ಮಾಡಿ ಬಿಜೆಪಿ ನಾಯಕರು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಯಲು ಹವಣಿಸುತ್ತಿದ್ದಾರೆ. ಇದು ಖಂಡನೀಯ ಎಂದು ರಾಯರೆಡ್ಡಿ ನುಡಿದರು.

Leave a Comment