ಅತೃಪ್ತರ ಮನ ಒಲಿಕೆಗೆ ಕೈ ನಾಯಕರ ಕೊನೆಗಳಿಗೆಯ ಕಸರತ್ತು

ಬೆಂಗಳೂರು, ಫೆ. ೧೨- ಬಿಜೆಪಿಯ ಕಮಲ ಹಿಡಿಯಲು ಮುಂದಾಗಿರುವ ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವ ಅಸ್ತ್ರ ಝಳಪಿಸಿರುವಾಗಲೇ ಅತೃಪ್ತರಿಗೆ ಸಚಿವ ಸ್ಥಾನ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿ, ಸರ್ಕಾರವನ್ನು ಸಂರಕ್ಷಿಸಿಕೊಳ್ಳಲು ಮೈತ್ರಿ ನಾಯಕರು ಮುಂದಾಗಿದ್ದಾರೆ.

ಅಪಾಯದ ಅಂಚಿನಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಕೊನೆಯ ಯತ್ನವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್‌ರವರು ಅತೃಪ್ತ ಶಾಸಕರಿಗೆ ಕರೆ ಮಾಡಿ ಸಚಿವ ಸ್ಥಾನ, ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದಾರೆ.

ಮುಂಬೈನಲ್ಲಿ ಬಿಜೆಪಿ ವಾಸ್ತವ್ಯ ಹೂಡಿರುವ ಅತೃಪ್ತ ಶಾಸಕರನ್ನು ಬಿಜೆಪಿ ವಶದಿಂದ ಶತಾಯ-ಗತಾಯ ಹೊರ ತರಲು ಮುಂದಾಗಿರುವ ಕಾಂಗ್ರೆಸ್ ನಾಯಕರು, ಮುಂಬೈನಿಂದ ವಾಪಸ್ಸಾದರೆ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಮುಂಬೈನಲ್ಲಿರುವ ಅತೃಪ್ತ ಶಾಸಕರ ಗುಂಪಿನ ನಾಯಕ ರಮೇಶ್ ಜಾರಕಿಹೊಳಿಯವರನ್ನು ಅವರ ಆಪ್ತರ ಮೂಲಕ ಸಂಪರ್ಕಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಈಗಲೂ ಮನಸ್ಸು ಬದಲಾಯಿಸಿ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬನ್ನಿ. ನಿಮಗೆ ಸಚಿವ ಸ್ಥಾನ ನೀಡಿ ನೀವು ಕೇಳಿದ ಖಾತೆ ನೀಡುವ ಜತೆಗೆ ನಿಮ್ಮ ಜತೆ ಇರುವ ಅತೃಪ್ತ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಅತೃಪ್ತ ಶಾಸಕರು ಈ ಆಹ್ವಾನವನ್ನು ಒಪ್ಪಿ ವಾವಸ್ಸಾದರೆ ಅವರ ವಿರುದ್ಧ ನೀಡಿರುವ ಅನರ್ಹತೆಯ ದೂರನ್ನು ವಾಪಸ್ ಪಡೆಯುವುದಾಗಿಯೂ ವೇಣುಗೋಪಾಲ್ ವಾಗ್ದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಶಾಸಕರಿಗೆ ಆಮಿಷವೊಡ್ಡುವ ಆಡಿಯೋ ರಾಜ್ಯರಾಜಕೀಯದಲ್ಲಿ ರಾದ್ಧಾಂತ ಎಬ್ಬಿಸಿದ್ದರೂ ಸರ್ಕಾರವನ್ನು ಉರುಳಿಸುವ-ಉಳಿಸುವ ಆಟ ಮಾತ್ರ ಇನ್ನು ನಿಂತಿಲ್ಲ. ಬಿಜೆಪಿ ನಾಯಕರು ಆಡಿಯೋ ಬಗ್ಗೆ ತಲೆಕೆಡಿಸಿಕೊಂಡಿದ್ದರೂ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವಂತೂ ಬಿಟ್ಟಿಲ್ಲ.

ಮುಂಬೈನಲ್ಲಿರುವ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಡಾ. ಉಮೇಶ್ ಜಾಧವ್ ಮತ್ತು ಮಹೇಶ್ ಕಮತಹಳ್ಳಿ ಜತೆಗೆ ಇನ್ನೂ ಹಲವು ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಈ ಅತೃಪ್ತ ಶಾಸಕರು ಸದ್ಯದಲ್ಲೇ ರಾಜೀನಾಮೆ ಕೊಡಿಸುವ ಸಾಧ್ಯತೆಯೂ ಇದೆ.

ವಿಧಾನಸಭೆಯಲ್ಲಿ ಬಜೆಟ್‌ ಅಂಗೀಕಾರಕ್ಕೆ ಮುನ್ನ ಸರ್ಕಾರ ಉರುಳಿಸುವ ದಾಳವನ್ನು ಬಿಜೆಪಿ ಬಳಸುವ ಸಾಧ್ಯತೆ ಇದೆ.

ಬಿಜೆಪಿಯ ಈ ಎಲ್ಲ ರಾಜಕೀಯ ಆಟವನ್ನು ಅರಿತಿರುವ ಕಾಂಗ್ರೆಸ್ ನಾಯಕರು, ಇದಕ್ಕೆ ಪ್ರತಿತಂತ್ರವಾಗಿ ಅತೃಪ್ತ ಶಾಸಕರನ್ನು ಓಲೈಸುವ ಪ್ರಯತ್ನ ನಡೆಸಿದ್ದು, ಅದರ ಭಾಗವಾಗಿಯೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅತೃಪ್ತ ಶಾಸಕರಿಗೆ ಅಧಿಕಾರ ನೀಡುವ ಮಾತುಗಳನ್ನು ಆಡಿದ್ದಾರೆ.

ಅತೃಪ್ತ ಶಾಸಕರು ಕಾಂಗ್ರೆಸ್ ನಾಯಕರ ಈ ಆಫರ್‌ನ್ನು ಒಪ್ಪುತ್ತಾರೆಯೋ? ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅತೃಪ್ತ ಶಾಸಕರು ಬಿಜೆಪಿ ಸಂಪರ್ಕದಿಂದ ಹೊರ ಬರುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಲಾಗುತ್ತಿದೆ.

Leave a Comment