ಅತೃಪ್ತರ ಆಗಮನ ಬಿಜೆಪಿಗೆ ತಳಮಳ

ಬೆಂಗಳೂರು, ಜು ೧೧- ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಇಂದು ಸಂಜೆ 6 ಗಂಟೆ ಒಳಗೆ ಸ್ಪೀಕರ್ ಎದುರು ಹಾಜರಾಗುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ಅತೃಪ್ತ ಶಾಸಕರು ಮುಂಬೈನಿಂದ ಬೆಂಗಳೂರಿನತ್ತ ಮುಖಮಾಡಿದ್ದಾರೆ.
ತಾವು ತಂಗಿದ್ದ ಖಾಸಗಿ ಹೋಟೆಲ್‌ನಲ್ಲಿ ಸಭೆ ಸೇರಿದ ಅತೃಪ್ತ ಶಾಸಕರು ಅಲ್ಲಿಂದ ವಿಶೇಷ ವಿಮಾನದ ಮೂಲಕ ಎಚ್‌ಎ‌ ಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲು ಮುಂದಾಗಿದ್ದ ಅಲ್ಲಿಂದ ನೇರವಾಗಿ ಎಲ್ಲರೂ ಸ್ಪೀಕರ್ ಮುಂದೆ ಹಾಜರಾಗಿ ರಾಜೀನಾಮೆಗೆ ಕಾರಣಗಳನ್ನು ವಿವರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಅತೃಪ್ತ ಶಾಸಕರು ಬೆಂಗಳೂರಿನತ್ತ ಮುಖ ಮಾಡುತ್ತಿದ್ದಂತೆ ಬಿಜೆಪಿ ನಾಯಕರಲ್ಲಿ ತಳಮಳ ಆರಂಭಗೊಂಡಿದೆ. ಮನವೊಲಿಕೆಗೆ ಬಗ್ಗಿ ಮರಳಿ, ತಮ್ಮ ಪಕ್ಷಗಳಿಗೆ ತೆರಳುತ್ತಾರೋ ಅಥವಾ ನಮ್ಮೊಂದಿಗೆ ಬರುತ್ತಾರೋ ಎನ್ನುವ ಟೆನ್ಷನ್ ಬಿಜೆಪಿ ನಾಯಕರ ತಲೆಬಿಸಿಗೆ ಕಾರಣವಾಗಿದೆ.
ಕಳೆದ ಐದಾರು ದಿನಗಳಿಂದ ಮುಂಬೈನಲ್ಲಿ ಬೀಡುಬಿಟ್ಟಿದ್ದ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆ ನಗರಕ್ಕೆ ಆಗಮಿಸಿ 6 ಗಂಟೆಗೂ ಮುನ್ನ ಸ್ಪೀಕರ್ ಮುಂದೆ ಹಾಜರಾಗಲಿದ್ದಾರೆ.
ಈಗಾಗಲೇ ಅತೃಪ್ತ ಶಾಸಕರಲ್ಲಿ ಒಬ್ಬರಾದ ಎಸ್.ಟಿ.ಸೋಮಶೇಖರ್ ಅವರು ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಸುಪ್ರೀಂ ಕೋರ್ಟ್ ನ ಆದೇಶ ಪ್ರಕಟವಾಗುತ್ತಿದ್ದಂತೆ ಅತೃಪ್ತ ಶಾಸಕರು ಸಭೆ ಸೇರಿ ಸುದೀರ್ಘವಾದ ಚರ್ಚೆ ನಡೆಸಿದ್ದು ನಂತರ ಬೆಂಗಳೂರಿನತ್ತ ಆಗಮಿಸಲು ವಿಮಾನವನ್ನು ಏರಿದ್ದಾರೆ.
ಇಂದು 6 ಗಂಟೆಯ ವೇಳೆಗೆ ವಿಧಾನಸಭಾಧ್ಯಕ್ಷರ ಮುಂದೆ ಈ ಅತೃಪ್ತ ಶಾಸಕರು ಹಾಜರಾಗಲಿದ್ದಾರೆ. ನಂತರದ ರಾಜಕೀಯ ವಿದ್ಯಮಾನ ತೀವ್ರ ಕುತೂಹಲ ಕೆರಳಿಸಿದೆ.

Leave a Comment