ಅತೃಪ್ತರಿಗೆ ಬಿಜೆಪಿ ಗಾಳ

ಬೆಂಗಳೂರು, ಜೂ. ೨೦- ಲೋಕಸಭಾ ಚುನಾವಣೆ ನಂತರ ಕೇಂದ್ರದಲ್ಲಿ ಸರ್ಕಾರ ರಚನೆಯಿಂದ ತೆರೆಮರೆಗೆ ಸರಿದಿದ್ದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಚಟುವಟಿಕೆಗಳು ಈಗ ಮತ್ತೆ ಬಿರುಸು ಪಡೆದಿದ್ದು, ತೆರೆಮರೆಯಲ್ಲೇ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪಥನಗೊಳಿಸುವ ರಾಜಕೀಯ ಚಟುವಟಿಕೆಗಳು ನಡೆದಿವೆ.
ಲೋಕಸಭಾ ಚುನಾವಣೆಯ ಫಲಿತಾಂಶ ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಅಸಮಾಧಾನ, ಅತೃಪ್ತಿ ತಾರಕಕ್ಕೇರಿದ್ದು, ಈ ಅಸಮಾಧಾನ ಅತೃಪ್ತಿಯ ಲಾಭ ಪಡೆಯಲು ಬಿಜೆಪಿ ಸದ್ದಿಲ್ಲದೆ ಆಪರೇಷನ್ ಕಮಲಕ್ಕೆ ಕೈ ಹಾಕಿದೆ.
ಪಕ್ಷದಲ್ಲಿ ಹಿರಿಯರಾಗಿದ್ದರೂ ಸಚಿವ ಸ್ಥಾನ ಸೇರಿದಂತೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಅಸಮಾಧಾನಗೊಂಡಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರುಗಳಿಗೆ ಬಿಜೆಪಿ ನಾಯಕರು ಗಾಳ ಹಾಕಿದ್ದು, ಸದ್ಯದಲ್ಲೇ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗುವ ಸಾಧ್ಯತೆಗಳು ಹೆಚ್ಚಿವೆ.
ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಈ ಸಮ್ಮಿಶ್ರ ಸರ್ಕಾರ ತಾನಾಗಿಯೇ ಬಿದ್ದು ಹೋಗುತ್ತದೆ. ಆಪರೇಷನ್ ಕಮಲಕ್ಕೆ ಕೈ ಹಾಕುವುದು ಬೇಡ ಎಂಬ ತೀರ್ಮಾನವನ್ನು ಬಿಜೆಪಿ ನಾಯಕರು ಕೈಗೊಂಡಿದ್ದರಾದರೂ, ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಅತೃಪ್ತ ಶಾಸಕರು ಬಿಜೆಪಿ ಸೇರಲು ತವಕಿಸುತ್ತಿರುವ ಹಿನ್ನೆಲೆಯಲ್ಲಿ ಅತೃಪ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಹೈಕಮಾಂಡ್‌ನ ಒಪ್ಪಿಗೆಯನ್ನು ರಾಜ್ಯ ನಾಯಕರು ಪಡೆದುಕೊಂಡಿದ್ದಾರೆ. ಹಾಗಾಗಿ ಮತ್ತೆ ರಾಜ್ಯ ರಾಜಕೀಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಚಟುವಟಿಕೆಗಳು ಬಿರುಸುಗೊಂಡಿವೆ.
ಕಳೆದ ವಾರ ದೆಹಲಿಗೆ ತೆರಳಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರು ಅಮಿತ್ ಶಾ ರವರ ಜತೆ ಚರ್ಚೆ ನಡೆಸಿದ್ದ ಸಂದರ್ಭದಲ್ಲಿ ಅಮಿತ್ ಶಾ ರವರು ಈ ಸರ್ಕಾರ ಸದ್ಯದಲ್ಲೇ ಬಿದ್ದು ಹೋಗುತ್ತದೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೂ ಸರ್ಕಾರ ಮುಂದುವರೆಯುವುದು ಇಷ್ಟವಿಲ್ಲ. ಸ್ವಲ್ಪ ದಿನ ತಾಳ್ಮೆಯಿಂದ ಇರಿ ಎಂದು ಹೇಳಿದ್ದರು. ಆದರೆ ಇದೀಗ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಅತೃಪ್ತ ಶಾಸಕರೇ ಬಿಜೆಪಿಗೆ ಬರಲು ಮುಂದಾಗಿರುವಾಗ ವಿಳಂಬ ಮಾಡದೆ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಟ್ಟು ಪರಿಸ್ಥಿತಿಯನ್ನು ನಿಭಾಯಿಸಿ ಎಂಬ ಸೂಚನೆಯನ್ನ ಅಮಿತ್ ಶಾ ನೀಡಿದ್ದಾರೆ.
ಅಧಿಕಾರ, ಆಮಿಷಗಳಿಗೆ ಬಲಿ ಬಿದ್ದು ಬರುವ ಶಾಸಕರುಗಳಿಗಿಂತ ಪ್ರಧಾನಿ ಮೋದಿ ಅವರ ನಾಯಕತ್ವ ಹಾಗೂ ಬಿಜೆಪಿ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ. ಮುಂದೆ ಪಕ್ಷಕ್ಕೆ ಬಂದ ನಂತರ ಈ ಅತೃಪ್ತ ಶಾಸಕರು ಬ್ಲಾಕ್‌ಮೇಲ್ ಮಾಡದಂತೆ ಎಚ್ಚರ ವಹಿಸಿ ಎಂದು ಹೇಳಿದ್ದಾರೆ.
ಬಿಜೆಪಿಗೆ ಬರುವ ಅತೃಪ್ತ ಶಾಸಕರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವ ಜವಾಬ್ದಾರಿಯನ್ನು ಬಿಜೆಪಿ ಹೊರುತ್ತದೆ ಎಂಬುದನ್ನು ಈ ಶಾಸಕರಿಗೆ ಸ್ಪಷ್ಟಪಡಿಸಿ. ಎಲ್ಲವನ್ನು ಎಚ್ಚರಿಕೆಯಿಂದ ನಿಭಾಯಿಸಿ ಎಂದು ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.
ಆಪರೇಷನ್ ಕಮಲಕ್ಕೆ ವರಿಷ್ಠರ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಬಿಜೆಪಿ ನಾಯಕರ ಚಟುವಟಿಕೆಗಳು ಬಿರುಸುಗೊಂಡಿದ್ದು, ಅದರಂತೆ ಕಾಂಗ್ರೆಸ್‌ನ ಅತೃಪ್ತ ಶಾಸಕರು 2-3 ದಿನಗಳ ಹಿಂದೆ ಶಾಸಕ ಬಿ.ಸಿ. ಪಾಟೀಲ್ ಮನೆಯಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ.
ಇದರ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹೆಚ್. ವಿಶ್ವನಾಥ್ ಸಹ ಪಕ್ಷ ಬಿಡುವ ಮನಸ್ಥಿತಿಯಲ್ಲಿದ್ದು ಅವರು ಕಾಂಗ್ರೆಸ್‌ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ನಿನ್ನೆ ಚರ್ಚೆ ನಡೆಸಿದ್ದರು.
ರಾಮಲಿಂಗಾರೆಡ್ಡಿ ಅವರು ಸಹ ಪಕ್ಷದ ಬೆಳವಣಿಗೆಗಳ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಹಿರಿಯ ನಾಯಕರುಗಳೆಲ್ಲಾ ಸೇರಿ ಒಂದು ರಾಜಕೀಯ ತೀರ್ಮಾನ ಕೈಗೊಳ್ಳುವುದು ಖಚಿತವಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಸಮ್ಮಿಶ್ರ ಸರ್ಕಾರಕ್ಕೆ ಸದ್ಯದಲ್ಲೇ ಅಪಾಯ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ.

Leave a Comment