ಅತೀವೇಗ ಅವಾಂತರ

ಪ್ರತ್ಯೇಕ ಅಪಘಾತ-ಮಹಿಳೆ ಬಲಿ 

೨೨ಕ್ಕೂ ಅಧಿಕ ಮಂದಿಗೆ ಗಾಯ

ಮಂಗಳೂರು, ಡಿ.೭- ನಗರದ ನಂತೂರು ಸರ್ಕಲ್ ಹಾಗೂ ಬೋಂದೆಲ್ ಸಮೀಪ ಇಂದು ಮುಂಜಾನೆ ಖಾಸಗಿ ಬಸ್‌ಗಳ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೋರ್ವರು ದಾರುಣ ಮೃತಪಟ್ಟಿದ್ದು, ೨೨ಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ನಂತೂರು ಸರ್ಕಲ್ ಸಮೀಪ ಅತೀವೇಗದಿಂದ ಸಿಗ್ನಲ್ ದಾಟಿ ಮುಂದಕ್ಕೆ ಚಲಿಸಿದ ಬಸ್ಸೊಂದು ಕಂಟೈನರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು ಪ್ರಯಾಣಿಕ ಮಹಿಳೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ೨೧ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಬೋಂದೆಲ್ ಸಮೀಪ ಸಿಟಿಬಸ್ಸೊಂದು ಅತೀವೇಗದಿಂದ ಸಂಚರಿಸಿ ಟ್ರ್ಯಾಕ್ಟರ್‌ಗೆ ಬಡಿದಿದ್ದು ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡಿದ್ದಾನೆ.

ಘಟನೆಯ ವಿವರ:

ಬೆಳಗ್ಗೆ ೮:೩೦ರ ಸುಮಾರಿಗೆ ಮಳಲಿಯಿಂದ ಸ್ಟೇಟ್‌ಬ್ಯಾಂಕ್‌ಗೆ ಬರುತ್ತಿದ್ದ ಪಿಟಿಸಿ ಹೆಸರಿನ ಬಸ್ ನಂತೂರು ಸಿಗ್ನಲ್ ದಾಟಿ ಅತೀವೇಗದಿಂದ ಮುನ್ನುಗ್ಗಿದ್ದು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಂಟೈನರ್ ಲಾರಿಯ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಕಂಟೈನರ್ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲೇ ಇದ್ದ ಕಾರಿಗೂ ಡಿಕ್ಕಿಯಾಗಿದೆ. ಘಟನೆಯಲ್ಲಿ ಎರಡೂ ವಾಹನಗಳ ಮುಂಭಾಗ ನಜ್ಜುಗುಜ್ಜಾಗಿದ್ದು, ಬಸ್ಸಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಮಳಲಿ ನಿವಾಸಿ ಕವಿತಾ(೨೯) ಸಹಿತ ಇತರ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಕವಿತಾ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಮಳಲಿಯ ಇತರ ಇಬ್ಬರಿಗೂ ಘಟನೆಯಲ್ಲಿ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಅಪಘಾತದಿಂದಾಗಿ ಗಂಟೆಗೂ ಹೆಚ್ಚುಕಾಲ ರಸ್ತೆ ಸಂಚಾರಕ್ಕೆ ತಡೆಯುಂಟಾಗಿತ್ತು. ಸ್ಥಳಕ್ಕೆ ಧಾವಿಸಿದ ಕದ್ರಿ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಬೋಂದೆಲ್ ಸಮೀಪ ವಿರುದ್ಧ ದಿಕ್ಕಿನಿಂದ ಅತೀವೇಗವಾಗಿ ಸಾಗಿಬಂದ ವಿನಯ ಪ್ರಸಾದ್ ಹೆಸರಿನ ಖಾಸಗಿ ಸಿಟಿಬಸ್ ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ಪಲ್ಟಿಯಾಗಿ ನಜ್ಜುಗುಜ್ಜಾಗಿದ್ದು ಉತ್ತರ ಕನ್ನಡ ಮೂಲದ ಚಾಲಕ ಗಂಭೀರ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದಲ್ಲಿ ಸಂಚಾರಿ ಠಾಣಾ ಪೊಲೀಸರು ಖಾಸಗಿ ಬಸ್‌ಗಳ ನಾಗಾಲೋಟಕ್ಕೆ ಕಡಿವಾಣ ಹಾಕಲು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಬಸ್ ಚಾಲಕರು ಅತೀವೇಗದಿಂದ ವಾಹನ ಚಲಾಯಿಸಿ ಅವಾಂತರವೆಸಗುತ್ತಿದ್ದು ಈ ಬಗ್ಗೆ ಮತ್ತಷ್ಟು ಕಠಿಣ ಕ್ರಮ ಜರುಗಿಸುವ ಅಗತ್ಯವಿದೆ ಎಂದು ಜನರು ದೂರುತ್ತಿದ್ದಾರೆ.

 

 

Leave a Comment