ಅತಿಯಾದ ಮದ್ಯಪಾನ ಸಾವಿನ ಸನಿಹ

ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಮದ್ಯಪಾನದಿಂದ ಜೀವಕ್ಕೆ ಅಪಾಯವೆಂಬುದು ಗೊತ್ತಿದ್ದರೂ ಹಲವು ಮಂದಿ ಮದ್ಯಪಾನದ ದಾಸರಾಗಿದ್ದಾರೆ.

ಅತೀ ಹೆಚ್ಚು ಮದ್ಯಪಾನದಿಂದ ಸಾವು ಬೇಗ ಆಗಲಿದೆ ಎಂಬುದು ಸಂಶೋಧನೆಗಳಿಂದ ಬಹಿರಂಗಗೊಂಡಿದೆ. ಮದ್ಯಪಾನದ ತೊಂದರೆಗಳ ಬಗ್ಗೆ ಸಂಶೋಧನೆ ನಡೆಸಿರುವ ಲಂಡನ್ ವಿಶ್ವವಿದ್ಯಾಲಯದ ಸಂಶೋಧಕರು ಅತೀ ಮದ್ಯಪಾನ ಬೇಗ ಸಾವು ತರಲಿದೆ ಎಂಬುದನ್ನು ತಮ್ಮ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಮದ್ಯಪಾನ ಆರೋಗ್ಯಕ್ಕೆ ಮಾರಕ ಎಂದು ಗೊತ್ತಿದ್ದರೂ ಒಮ್ಮೆ ಈ ಚಟಕ್ಕೆ ಜೋತು ಬಿದ್ದರೆ ಅದರಿಂದ ಹೊರ ಬರುವುದು ತುಂಬಾ ಕಷ್ಟ. ಅದರಲ್ಲೂ ಮಿತಿ ಮೀರಿದ ಕುಡಿತ ಅಭ್ಯಾಸವಾದರೆ ಯಮಲೋಕದ ಬಾಗಿಲು ತಟ್ಟಿದ್ದಂತೆಯೇ ಎಂಬುದನ್ನು ಈ ವೈದ್ಯಕೀಯ ಸಂಶೋಧನಾ ವರದಿಗಳು ದೃಢಪಡಿಸಿವೆ.

೩೦ ವರ್ಷ ಮೀರಿದ ವಯಸ್ಕರು ಅತೀ ಹೆಚ್ಚು ಮದ್ಯಪಾನದಲ್ಲಿ ತೊಡಗಿದ್ದರೆ ಈಗಿನಿಂದಲೇ ಮದ್ಯಪಾನ ಬಿಡುವುದು ಒಳ್ಳೆಯದು. ಇಲ್ಲದಿದ್ದರೆ ಹೆಚ್ಚು ಮದ್ಯಪಾನ ಮಾಡುವ ವ್ಯಕ್ತಿಯ ಅಪಧಮನಿ ಬಿಗಿಯಾಗುವಿಕೆ, ಅಪಧಮನಿಗಳಿಗೆ ಅಕಾಲಿಕವಾಗಿ ವಯಸ್ಸಾಗಿ ರೋಗಗಳಿಗೆ ಈಡಾಗಿ ಮರಣದ ಕದ ತಟ್ಟುವುದು ನಿಶ್ಚಿತ.

ಕಡಿಮೆ ಕುಡಿಯುವವರಿಗಿಂತ ಅತೀ ಹೆಚ್ಚು ಮದ್ಯಪಾನ ಮಾಡುವವರಲ್ಲಿ ಈ ಮದ್ಯಪಾನದ ಅಪಾಯ ಬೇಗ ಆಗುತ್ತದೆ. ಹಾಗೆಂದು ಕಡಿಮೆ ಕುಡಿಯುವವರಿಗೆ ತೊಂದರೆ ಇಲ್ಲ ಎಂದು ಹೇಳಲಾಗದು, ಅವರಿಗೂ ಮದ್ಯಪಾನದಿಂದ ತೊಂದರೆ ಎಂದು ಸಂಶೋಧಕರು ಹೇಳಿದ್ದಾರೆ.

ಮದ್ಯಪಾನ ಬಿಟ್ಟ ನಂತರ ಆರೋಗ್ಯ ಉತ್ತಮವಾಗಿರುತ್ತದೆ. ಈ ಸಂಬಂಧ ನಡೆದಿರುವ ಅಧ್ಯಯನಗಳು ಮದ್ಯಪಾನ ಬಿಟ್ಟ ನಂತರ ಕೆಲವೇ ವರ್ಷಗಳಲ್ಲಿ ಆರೋಗ್ಯ ಸುಧಾರಿಸುತ್ತದೆ ಎಂಬುದನ್ನೂ ಹೇಳಿವೆ.

ವಿಪರೀತ ಮದ್ಯಪಾನ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು, ಹೆಚ್ಚು ರಕ್ತದೊತ್ತಡ, ಬೊಜ್ಜು, ಪಾರ್ಶ್ವವಾಯು, ಕ್ಯಾನ್ಸರ್ ಮತ್ತಿತರ ರೋಗಗಳು ಬರಬಹುದು ಎಂಬ ಎಚ್ಚರಿಕೆಯನ್ನೂ ವೈದ್ಯರು ನೀಡಿದ್ದಾರೆ.

ವಿಪರೀತವಾಗಿ ಮದ್ಯಪಾನ ಮಾಡುವ ಕೆಲವರಲ್ಲಿ ಆತ್ಮಹತ್ಯೆಯಂತಹ ಯೋಚನೆಗಳೂ ಬರಬಹುದು. ಹಾಗಾಗಿ, ಉತ್ತಮ ಹಾಗೂ ಆರೋಗ್ಯದಂತ ಬದುಕು ಸಾಗಿಸಲು ಮದ್ಯಪಾನದಿಂದ ದೂರ ಇರುವುದೇ ಒಳ್ಳೆಯದು.

Leave a Comment