‘ಅತಿಥಿ ವರ್ಧಾರ್’ ದರ್ಶನ ಪಡೆದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಚೆನ್ನೈ, ಜು 12 – ಎರಡು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ಕಾಂಚಿಪುರಂನ ವರದರಾಜಸ್ವಾಮಿ ದೇವಾಲಯದಲ್ಲಿ “ಅತಿಥಿ ವರ್ಧಾರ್” ದರ್ಶನ ಪಡೆದರು.
ಇದಕ್ಕೂ ಮೊದಲು ದೆಹಲಿಯಿಂದ ಇಲ್ಲಿಗೆ ಆಗಮಿಸಿದ ರಾಷ್ಟ್ರಪತಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿ ಅವರನ್ನು ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಎಡಪ್ಪಡಿ ಕೆ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಒ ಪನ್ನೀರ್‌ಸೆಲ್ವಂ, ಪೊಲೀಸ್ ಮಹಾ ನಿರ್ದೇಶಕ ಜೆ.ಜೆ. ತ್ರಿಪಾಠಿ, ಚೆನ್ನೈ ನಗರ ಪೊಲೀಸ್ ಆಯುಕ್ತ ಎ.ಕೆ. ವಿಶ್ವನಾಥನ್ ಮತ್ತು ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು.
ಬಳಿಕ, ರಾಷ್ಟ್ರಪತಿ ಅವರು ತಮ್ಮ ಕುಟುಂಬ ಸಮೇತರಾಗಿ ರಾಜ್ಯಪಾಲರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಕಾಂಚೀಪುರಂಗೆ ತೆರಳಿದರು. ಅಲ್ಲಿ ಅವರನ್ನು ಜಿಲ್ಲಾಧಿಕಾರಿ ಪೊನ್ನಯ್ಯ ಬರಮಾಡಿಕೊಂಡರು.
ಅಥಿತಿ ವರ್ಧಾರ್ ಉತ್ಸವ 40 ವರ್ಷಕ್ಕೊಮ್ಮೆ ನಡೆಯುತ್ತದೆ. ದೇವಾಲಯದ ಕಲ್ಯಾಣಿಯಿಂದ ಬೆಳ್ಳಿಯ ಪೆಟ್ಟಿಗೆಯನ್ನು ಹೊರತೆಗೆದು ‘ಅಥಿ ವರ್ಧಾರ್’ ನ ದರ್ಶನ ನಡೆಯುತ್ತದೆ. ರಾಷ್ಟ್ರಪತಿ ದರ್ಶನ ಪಡೆದ ಬಳಿಕ ನಗರಕ್ಕೆ ಆಗಮಿಸಿದರು.
ರಾಜಭವನದಲ್ಲಿ ರಾತ್ರಿ ತಂಗಲಿರುವ ಕೋವಿಂದ್, ರೇಣಿಗುಂಟಕ್ಕೆ ತೆರಳುವ ಮೊದಲು ಡಾ.ಅಂಬೇಡ್ಕರ್ ಕಾನೂನು ಕಾಲೇಜಿನ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಳಿಕ ಅವರು ತಿರುಮಲ ದೇವಾಲಯಕ್ಕೆ ತೆರಳಿ ವೆಂಕಟೇಶ್ವರನ ದರ್ಶನ ಪಡೆಯಲಿದ್ದಾರೆ. ಆ ನಂತರ ಅವರು ಶ್ರೀಹರಿಕೋಟಾಕ್ಕೆ ತೆರಳಿ, ಸೋಮವಾರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಉಡಾವಣೆ ಮಾಡುವ ಚಂದ್ರಯಾನ -2 ಅಭಿಯಾನಕ್ಕೆ ಸಾಕ್ಷಿಯಾಗಲಿದ್ದಾರೆ.
ರಾಷ್ಟ್ರಪತಿ ಭೇಟಿಯ ಹಿನ್ನೆಲೆಯಲ್ಲಿ ಕಾಂಚೀಪುರಂ ಮತ್ತು ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

Leave a Comment