ಅಣ್ಣಾ ಡಿಎಂಕೆಯಿಂದ ಶಶಿಕಲಾ ವಜಾ ಮುಗಿಯದ ಕಲಹ

ಚೆನ್ನೈ, ಫೆ. ೧೭ – ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಶಶಿಕಲಾ ಬಣದ ಕೆ. ಪಳನಿಸ್ವಾಮಿ ಅಧಿಕಾರ ವಹಿಸಿಕೊಂಡರೂ ಎಐಎಡಿಎಂಕೆ ಪಕ್ಷದಲ್ಲಿನ ಕದನ ಮುಗಿದಿಲ್ಲ. ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಓ. ಪನ್ನೀರ್ ಸೆಲ್ವಂ ಬಣ ಇಂದು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಶಿಕಲಾ ಹಾಗೂ ಅವರ ಇಬ್ಬರು ಸಂಬಂಧಿಗಳನ್ನು ಪಕ್ಷ ವಿರೋಧಿ ಚಟುವಟಿಕೆ ಮೇಲೆ ವಜಾ ಮಾಡಲಾಗಿದೆ.
ಎಐಎಡಿಎಂಕೆಯ ಅಧ್ಯಕ್ಷ ಇ. ಮಧುಸೂದನ್ ಅವರು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಶಿಕಲಾ ಅವರನ್ನು ವಜಾಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮೊದಲು ತಮ್ಮ ವಿರುದ್ಧ ಬಂಡೆದ್ದಿದ್ದ ಮಾಜಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಹಾಗೂ ಎಐಎಡಿಎಂಕೆ ಗೌರವಾಧ್ಯಕ್ಷ ಇ. ಮಧುಸೂದನ್ ಅವರನ್ನು ಶಶಿಕಲಾ ಅವರು ಪಕ್ಷದಿಂದ ವಜಾಗೊಳಿಸಿದ್ದರು. ಆದರೆ, ಈ ಇಬ್ಬರೂ ನಿಜವಾದ ಎಐಎಡಿಎಂಕೆ ತಮ್ಮ ಬಣದ್ದೇ ಎಂದು ಹೇಳಿ ಶಶಿಕಲಾ ಹಾಗೂ ಅವರ ಸಂಬಂಧಿಗಳಾದ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಮತ್ತು ಎಸ್. ವೆಂಕಟೇಶ್ ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ ಎಂದು ಮಧುಸೂದನ್ ತಿಳಿಸಿದ್ದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿಕಲಾ ಅವರು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ದಿ. ಜಯಲಲಿತಾ ಅವರಿಗೆ ಪ್ರಮಾಣ ಮಾಡಿದ್ದರು. ಅದನ್ನು ಉಲ್ಲಂಘಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದರಿಂದ ಅವರನ್ನು ಪಕ್ಷದಿಂದ ಉಚ್ಛಾಟಿಸಿರುವುದರ ಜತೆಗೆ ಸದಸ್ಯತ್ವದಿಂದಲೂ ತೆಗೆದು ಹಾಕಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Leave a Comment