ಅಡ್ಡಾದಿಡ್ಡಿ ಚಾಲನೆ

 ಕೇರಳ ಯುವಕ ಸೆರೆ 

ಮಂಗಳೂರು, ಆ.೨೬- ಕರ್ತವ್ಯನಿರತ ಪೊಲೀಸರ ಸೂಚನೆ ಧಿಕ್ಕರಿಸಿ ಅಡ್ಡಾದಿಡ್ಡಿ ವಾಹನ ಚಲಾಯಿಸಿದ ಕೇರಳದ ಯುವಕನನ್ನು ಕದ್ರಿ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕಾಸರಗೋಡು ನಿವಾಸಿ ಮುಹಮ್ಮದ್ ಕುಂಞಿ ಬಂಧಿತ ಆರೋಪಿ. ಕೇರಳದಿಂದ ಬಂದ ಕಾರೊಂದು ಪಂಪ್‌ವೆಲ್ ಮಾರ್ಗವಾಗಿ ಮಂಗಳೂರು ನಗರ ಪ್ರವೇಶಿಸಿದೆ. ಕಾರಿನ ಗಾಜುಗಳಲ್ಲಿ ಕಪ್ಪುಬಣ್ಣದ ಟಿಂಟ್ ಹಾಕಲಾಗಿತ್ತು. ಹಾಗಾಗಿ ಟಿಂಟ್ ತೆರವುಗೊಳಿಸುವಂತೆ ಸೂಚಿಸಲು ಪೊಲೀಸರು ಪ್ರಯತ್ನಿಸಿದ್ದರು. ಆದರೆ ಆರೋಪಿ ಚಾಲಕ ಕಾರನ್ನು ನಿಲ್ಲಿಸದೇ ಸಂಚಾರ ನಿಯಮ ಪಾಲಿಸದೇ ಜ್ಯೋತಿ ಸರ್ಕಲ್ ದಾಟಿ ಬಂಟ್ಸ್ ಹಾಸ್ಟೆಲ್ ನಿಂದ ಪಿವಿಎಸ್ ತಲುಪಿದ್ದಾನೆ. ಈ ವೇಳೆ ಅಲ್ಲಿನ ಸಂಚಾರ ಪೊಲೀಸರು ಕೂಡ ಕಾರನ್ನು ತಡೆಯಲು ಯತ್ನಿಸಿ ವಿಫಲರಾಗಿದ್ದಾರೆ. ಬಳಿಕ ಅಲ್ಲಿಂದ ಮುಂದೆ ಸಾಗಿದ ಕಾರು ಲಾಲ್‌ಭಾಗ್‌ನಲ್ಲಿರುವ ಸಂಚಾರ ಪೊಲೀಸರ ಕಣ್ಣು ತಪ್ಪಿಸಿ ನೇರ ಕದ್ರಿಗೆ ತಲುಪಿದೆ. ಕಾಸರಗೋಡಿನಿಂದ ಬಂದ ಕಾರು ಕದ್ರಿ ಸರ್ಕ್ಯೂಟ್ ಹೌಸ್ ತಲುಪುತ್ತಿದ್ದಂತೆ ಸಂಚಾರ ಪೊಲೀಸರಾದ ಗಜೇಂದ್ರ ಮತ್ತು ನಾರಪ್ಪ ಬ್ಯಾರಿಕೇಡ್ ಹಾಕಿ ಕಾರನ್ನು ತಡೆಯಲು ಯತ್ನಿಸಿದ್ದಾರೆ. ಆ ಬಳಿಕವೂ ಕಾರು ಚಾಲಕ ಬ್ಯಾರಿಕೇಡ್ ಮುರಿದು ಕಾರನ್ನು ನುಗ್ಗಿಸಲು ಪ್ರಯತ್ನಿಸಿದ್ದಾನೆ. ಆದರೆ ಕಾರು ನಿಲ್ಲಿಸಲು ಸಾಧ್ಯವಾಗಲಿಲ್ಲ. ಪ್ರಯತ್ನ ಬಿಡದ ಪೊಲೀಸರು ಕದ್ರಿ ಕಂಬಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಗೆ ಹೋಗುತ್ತಿದ್ದಾಗ ಕಾರನ್ನು ತಡೆದು ನಿಲ್ಲಿಸಿ, ಕಾರಿನಲ್ಲಿದ್ದ ಯುವಕನನ್ನು ಬಂಧಿಸಿದ್ದಾರೆ. ಈ ವೇಳೆ ಸಂಚಾರ ಪೊಲೀಸರಾದ ಗಜೇಂದ್ರ ಮತ್ತು ನಾರಪ್ಪ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಜೇಂದ್ರ ಅವರಿಗೆ ಹೆಚ್ಚಿನ ಗಾಯಗಳಾಗಿದ್ದರೆ, ನಾರಪ್ಪಅವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

Leave a Comment