ಅಡಕೆ ಕಳವು: ಪೊಲೀಸರಿಂದ ಪರಿಶೀಲನೆ

ಬಂಟ್ವಾಳ, ಜೂ.೨೦- ತಾಲೂಕಿನ ಮಂಚಿ ಗ್ರಾಮದ ಮೋಂತಿಮಾರುಪಡ್ಪು ಎಂಬಲ್ಲಿನ ನಿವಾಸಿ ಮೊಯಿದಿನ್ ಎಂಬವರ ಮನೆಗೆ ಮಂಗಳವಾರ ರಾತ್ರಿ ನುಗ್ಗಿದ ಕಳ್ಳರು ಸುಮಾರು ೩ ಕ್ವಿಂಟಾಲ್ ಸುಲಿದ ಅಡಕೆ ಕಳವುಗೈದು ಪರಾರಿಯಾಗಿದ್ದಾರೆ.

ಅಡಕೆ ಲೀಸ್ ವ್ಯಾಪಾರಿ ಯಾಗಿರುವ ಮೊಯಿದಿನ್ ಅವರು ತಾನು ಖರೀದಿಸಿದ ಅಡಕೆಗಳನ್ನು ತನ್ನ ಮನೆ ಸಮೀಪದ ಹಳೆ ಮನೆಯ ಅಂಗಳದಲ್ಲೇ ಒಣಗಿಸಿ ಬಳಿಕ ಅವುಗಳನ್ನು ಸುಲಿದು ಮನೆಯೊಳಗೆ ಸಂಗ್ರಹಿಸಿಟ್ಟು ಬಳಿಕ ಅದನ್ನು ಮಾರಾಟ ಮಾಡುತ್ತಿದ್ದರು. ಮಂಗಳವಾರ ಕೂಡಾ ಕಾರ್ಮಿಕರು ಸುಮಾರು ೯ ಗೋಣಿ ಚೀಲದಷ್ಟು ಅಡಕೆಗಳನ್ನು ಸುಲಿದು ಮನೆಯೊಳಗೆ ಇಟ್ಟು ಬೀಗ ಹಾಕಿ ತೆರಳಿದ್ದರು. ಬುಧವಾರ ಬೆಳಿಗ್ಗೆ ಕೆಲಸಗಾರರೊಂದಿಗೆ ಮನೆ ಪ್ರವೇಶಿಸುವ ವೇಳೆ ಮನೆಯ ಬೀಗ ಒಡೆಯಲಾಗಿತ್ತು. ಒಳಗೆ ಪ್ರವೇಶಿಸಿ ನೋಡಿದಾಗ ೯ ಗೋಣಿ ಚೀಲ ಸುಲಿದ ಅಡಕೆಗಳ ಪೈಕಿ ೩ ಗೋಣಿ ಚೀಲ ಮಾತ್ರ ಇತ್ತು. ಉಳಿದ ೬ ಗೋಣಿ ಅಡಕೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಕಳವುಗೈದ ಅಡಕೆಗಳ ಒಟ್ಟು ಮೌಲ್ಯ ಸುಮಾರು ೭೬ ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

Leave a Comment