ಅಟಲ್ ನಿಧನಕ್ಕೆ ಪಾಕ್ ಸರ್ಕಾರ, ನಾಯಕರ ಸಂತಾಪ

ಇಸ್ಲಾಮಾಬಾದ್, ಆ.೧೭- ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪಾಕಿಸ್ತಾನ ಸರ್ಕಾರ ಮತ್ತು ಉನ್ನತ ನಾಯಕರು ಗೌರವ ಸಲ್ಲಿಸಿದ್ದು ಉಭಯ ದೇಶಗಳ ಸಂಬಂಧಗಳಲ್ಲಿ ಬದಲಾವಣೆ ತರುವಲ್ಲಿ ಕಾರಣರಾದವರು ಎಂದು ಶ್ಲಾಘಿಸಿದ್ದಾರೆ.

ವಾಜಪೇಯಿ ಅವರು ಪ್ರಾದೇಶಿಕ ಸಹಕಾರ ಮತ್ತು ಅಭಿವೃದ್ಧಿಗೂ ಕೊಡುಗೆ ಸಲ್ಲಿಸಿದ ವ್ಯಕ್ತಿ ಎಂದೂ ಕೊಂಡಾಡಿದ್ದಾರೆ.

ಭಾರತ-ಪಾಕಿಸ್ತಾನದ ನಡುವಿನ ಶಾಂತಿಗಾಗಿ ವಾಜಪೇಯಿ ಅವರು ನಡೆಸಿದ ಯತ್ನಗಳು ಚಿರಸ್ಮರಣೀಯ ಎಂದೂ ಪಾಕ್ ಪ್ರಧಾನಿ ಪಟ್ಟ ಅಲಂಕರಿಸಲಿರುವ ಮಾಜಿ ಕ್ರಿಕೆಟ್ ತಾರೆ ಇಮ್ರಾನ್ ಖಾನ್ ಹೇಳಿದ್ದಾರೆ.

ವಾಜಪೇಯಿ ಅವರ ನಿಧನ ವಾರ್ತೆ ಕೇಳಿ ನಮಗೆ ಅತೀವ ದುಃಖವಾಗಿದೆ ಎಂದೂ ವಿದೇಶಾಂಗ ಕಛೇರಿ ವಕ್ತಾರ ಮೊಹಮ್ಮದ್ ಫೈಜಲ್ ಹೇಳಿದ್ದಾರೆ.

ವಾಜಪೇಯಿಯವರು ಸುಪ್ರಸಿದ್ಧ ಮುತ್ಸದ್ಧಿಯಾಗಿದ್ದು ಭಾರತ-ಪಾಕ್ ಸಂಬಂಧಗಳು ಬದಲಾಗುವತ್ತ ಶ್ರಮಿಸಿದ್ದರಲ್ಲದೆ ಸಾರ್ಕ್ ಹಾಗೂ ಪ್ರಾದೇಶಿಕ ಸಹಕಾರ ಮತ್ತು ಅಭಿವೃದ್ಧಿಗೆ ಕೊಡುಗೆ ಸಲ್ಲಿಸಿದ್ದರೆಂದೂ ಫೈಜಲ್ ಹೇಳಿದ್ದಾರೆ.

ವಾಜಪೇಯಿ ಅವರ ಕುಟುಂಬಕ್ಕೆ, ಸರ್ಕಾರಕ್ಕೆ ಮತ್ತು ಭಾರತದ ಜನತೆಗೆ ಪಾಕಿಸ್ತಾನದ ಸರ್ಕಾರ ಮತ್ತು ಜನತೆ ಶೋಕ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತದೆಂದೂ ಅವರು ಹೇಳಿದ್ದಾರೆ.

Leave a Comment