ಅಟಲ್ ಜೀ ಅಗಲಿಕೆಯಿಂದ ರಾಷ್ಟ್ರಕ್ಕೆ ತುಂಬಲಾರದ ನಷ್ಟ: ಜಿಎಸ್‌ಬಿ

ತುಮಕೂರು, ಆ. ೧೭- ಭಾರತ ರತ್ನ, ಕಾರ್ಗಿಲ್ ವಿಜಯಿ, ಪ್ರೋಖ್ರಾನ್ ಅಣ್ವಸ್ತ್ರದ ಉಡಾವಣೆಯ ಹರಿಕಾರ, ಸುವರ್ಣ ಚತುಷ್ಪತ ರಾಷ್ಟ್ರೀಯ ಹೆದ್ದಾರಿಯ ನಿರ್ಮಾತೃ, ಕವಿ ಹೃದಯಿ, ಅಜಾತ ಶತ್ರು ಅಟಲ್ ಜೀ ರವರ ಅಗಲಿಕೆಯಿಂದ ರಾಷ್ಟ್ರಕ್ಕೆ ತೀವ್ರ ನಷ್ಟವಾಗಿದೆ ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜು ಹೇಳಿದರು.

ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದ ಅವರು, ವಾಜಪೇಯಿ ಅವರು ಪ್ರಧಾನ ಮಂತ್ರಿಗಳಾದ ಸಂದರ್ಭದಲ್ಲಿ ನಾನು ಸಂಸದನಾಗಿ ಅವರ ಕಾರ್ಯವೈಖರಿಯನ್ನು ಬಲ್ಲವನಾಗಿದ್ದು, ಪಕ್ಷ, ವಿಪಕ್ಷಗಳ ಭಿನ್ನ ಭೇದಗಳಿಲ್ಲದೇ ರಾಷ್ಟ್ರದ ಅಭಿವೃದ್ದಿಗೆ ಕಂಕಣ ಬದ್ದರಾಗಿ ತನ್ನ ತತ್ವ ಸಿದ್ದಾಂತಗಳಿಗೆ ಎಂದಿಗೂ ರಾಜಿಯಾಗದೇ, ಪ್ರಧಾನಿ ಹುದ್ದೆಯನ್ನು ಉಳಿಸಿಕೊಳ್ಳುವ ಸಂದರ್ಭದಲ್ಲಿಯೂ ಸಹ ಎಂದಿಗೂ ಕುದರೆ ವ್ಯಾಪಾರ ಮಾಡದೇ ನಿರ್ಭಯದಿಂದ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಿ ಭಾರತವನ್ನು ಪ್ರಕಾಶಿಸುವಂತೆ ಮಾಡಿದ ಆದರ್ಶ ಪುರುಷ ಅಟಲ್ ಬಿಹಾರಿ ವಾಜಪೇಯಿ ಎಂದು ಬಣ್ಣಿಸಿದರು.

ನದಿಗಳ ಜೋಡಣೆಯ ಕನಸು ಹೊತ್ತಿದ್ದ ಪುಣ್ಯ ಪುರುಷನ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದರು.

ಮಾಜಿ ಸಚಿವ ಹಾಗೂ ಶಾಸಕ ವಿ. ಸೋಮಣ್ಣ ಮಾತನಾಡಿ, ಪೂರ್ವ ಪಾಕಿಸ್ತಾನವನ್ನು ಗೆದ್ದು ಕೊಟ್ಟ ಅಂದಿನ ಪ್ರಧಾನಿ ಇಂದಿರಾಗಾಂಧಿಯವರನ್ನು ದುರ್ಗೆಯ ಸ್ವರೂಪವೆಂದು ಮುಕ್ತ ಕಂಠದಿಂದ ಹೊಗಳಿದ ವಿರೋಧ ಪಕ್ಷದ ನಾಯಕರಾಗಿದ್ದ ಮಾಜಿ ಪ್ರಧಾನಿ ಅಟಲ್ ಜೀ ಹೃದಯ ವೈಶಾಲ್ಯತೆಯನ್ನು ನಮ್ಮಂತಹ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕು ಎಂದರು.

ಮಾಜಿ ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ನಾನು ರಾಜಕಾರಣಕ್ಕೆ ಬರಲು ಅಟಲ್ ಜೀ ರವರೇ ಪ್ರೇರಣೆ. ನನ್ನಂತ ಲಕ್ಷಾಂತರ ಕಾರ್ಯಕರ್ತರಿಗೆ ಪ್ರೇರಣದಾಯಿಗಳಾಗಿದ್ದಂತ ಮಹಾನ್ ಚೇತನವು ನಮ್ಮನ್ನು ಅಗಲಿರುವುದು ದುಃಖ ಉಂಟು ಮಾಡಿದೆ ಎಂದರು.

ಸಂತಾಪ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್, ಮಾಜಿ ವಿಧಾನ ಪರಿಷತ್ತು ಸದಸ್ಯ ಡಾ. ಹುಲಿನಾಯ್ಕರ್,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಹೆಬ್ಬಾಕ, ಲಕ್ಷ್ಮೀಶ್, ಬಾವಿಕಟ್ಟೆ ನಾಗಣ್ಣ, ಮಲ್ಲಿಕಾರ್ಜನ್, ನಗರಾಧ್ಯಕ್ಷ ಸಿ.ಎನ್. ರಮೇಶ್, ಹೆಚ್.ಎಂ. ರವೀಶ್, ರುದ್ರೇಶ್, ಸರೋಜಗೌಡ, ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷ ರಾಮಚಂದ್ರಪ್ಪ ಮತ್ತಿತರರು ಪಾಲ್ಗೊಂಡಿದ್ದರು.

Leave a Comment