ಅಜ್ಜಯ್ಯನ ಮಠಕ್ಕೆ ಡಿಕೆಶಿ ಭೇಟಿ

ಬೆಂಗಳೂರು, ಸೆ. ೧೨- ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ತೀವ್ರ ಕುತೂಹಲಗಳ ತಿರುವು ಪಡೆಯುತ್ತಿರುವ ಬೆನ್ನಲ್ಲೇ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತುಮಕೂರು ಜಿಲ್ಲೆಯ ನೊಣವಿನಕೆರೆಯ ಅಜ್ಜಯ್ಯನ ಮೊರೆ ಹೋಗಿದ್ದಾರೆ.
ಸಂಕಷ್ಟ ಎದುರಾದಾಗಲೆಲ್ಲಾ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಶಿವಕುಮಾರ್ ಇಂದು ಬೆಳಿಗ್ಗೆ ಅಜ್ಜಯ್ಯನ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದ ಬಳಿಕ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದರು. ಅಲ್ಲದೆ ರಾಜ್ಯದ ಸಮ್ಮಿಶ್ರದ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿಷಯದಲ್ಲಿ ಇಂಧನ ಇಲಾಖೆಗೆ ಬಿಗಿಪಟ್ಟು ಹಿಡಿದಿದ್ದ ಡಿ.ಕೆ. ಶಿವಕುಮಾರ್, ಶ್ರೀಗಳ ಸಲಹೆಯಂತೆ ಇಂಧನ ಇಲಾಖೆ ಬಿಟ್ಟು, ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಒಪ್ಪಿಕೊಳ್ಳಲು ಸಮ್ಮತಿಸಿದ್ದರು.
ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಡಿ.ಕೆ. ಶಿವಕುಮಾರ್ ಮಧ್ಯೆ ಪ್ರವೇಶಿಸಿದ್ದೇ, ಇತ್ತೀಚಿನ ರಾಜಕೀಯ ಬೆಳವಣಿಗೆಗೆ ಕಾರಣ ಎಂದು ಜಾರಕಿಹೊಳಿ ಸಹೋದರರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್, ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ.

Leave a Comment