ಅಜರ್: ಮತ್ತಷ್ಟು ಕಾಲಾವಕಾಶ ಅಗತ್ಯ-ಚೀನಾ

ಬೀಜಿಂಗ್ (ಚೀನಾ), ಮಾ. ೧೫: ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸಿ, ‘ಅಂತಾರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸಲು ವಿಶ್ವಸಂಸ್ಥೆ ಕೈಗೊಂಡಿರುವ ನಿರ್ಣಯಕ್ಕೆ ತಾನು ಒಡ್ಡಿರುವ ‘ತಾಂತ್ರಿಕ ತಡೆ’ಯನ್ನು ಚೀನಾ ಸಮರ್ಥಿಸಿಕೊಂಡಿದೆ. ಅಲ್ಲದೆ, ಈ ಕುರಿತು ವಿವಿಧ ದೇಶಗಳು ಮಂಡಿಸಿರುವ ಮನವಿ ಬಗ್ಗೆ ‘ಸವಿಸ್ತಾರ ಹಾಗೂ ಆಳವಾದ ಅಧ್ಯಯನ’ ಮಾಡಬೇಕಾಗಿರುವುದರಿಂದ ತನಗೆ ಇನ್ನೂ ‘ಕಾಲಾವಧಿ’ ಅಗತ್ಯ ಎಂದು ಪ್ರತಿಪಾದಿಸಿದೆ.

ಈ ವಿಷಯವಾಗಿ ಸಂಬಂಧಪಟ್ಟ ಎಲ್ಲ ಪಾಲುದಾರರೊಂದಿಗೆ ಸಮಾಲೋಚಿಸಿ ‘ಜವಾಬ್ದಾರಿಯುತವಾಗಿ ಎತ್ತಿಹಿಡಿಯಬಲ್ಲಂತಹ’ ‘ಅಂತಿಮ ತೀರ್ಮಾನ’ವೊಂದನ್ನು ಕೈಗೊಳ್ಳುವ ನಿಟ್ಟಿನಲ್ಲಿ ತಾನು ‘ಅನ್ಯೋನ್ಯತೆ’ ಮುಂದುವರೆಸುವುದಾಗಿ ಚೀನಾ ಹೇಳಿಕೊಂಡಿದೆ.
ಉಗ್ರಗಾಮಿ ಸಂಘಟನೆಗಳು ಅಥವಾ ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ೧೨೬೭ನೇ ಸಂಖ್ಯೆಯ ಸಮಿತಿಯು ಸ್ಪಷ್ಟವಾದ ಮಾನದಂಡಗಳನ್ನು ಹೊಂದಿದೆ. ಆದರೂ ಈ ಕುರಿತು ಸಂಬಂಧಪಟ್ಟ ವಿವಿಧ ದೇಶಗಳು ಸಲ್ಲಿಸಿರುವ ಮನವಿಗಳನ್ನು ಕೂಲಂಕಶ ಹಾಗೂ ಸವಿಸ್ತಾರವಾಗಿ ಪರಿಶೀಲಿಸಲು ಮುಂದಾಗಿದೆ. ಅದಕ್ಕಾಗಿ ತನಗೆ ಇನ್ನೂ ಸಾಕಷ್ಟು ‘ಕಾಲಾವಧಿ’ ಬೇಕಾಗಿರುವುದರಿಂದಲೇ ಈ ನಿರ್ಣಯಕ್ಕೆ ‘ತಾಂತ್ರಿಕ’ ತಡೆ ಒಡ್ಡಿರುವುದಾಗಿ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಸಮರ್ಥಿಸಿಕೊಂಡಿದ್ದಾರೆ.

Leave a Comment