ಅಚಾತುರ್ಯದಿಂದ ವಿಮಾನ ಹೊಡೆದುರುಳಿಸಿದೆವು: ಇರಾನ್ ಹೇಳಿಕೆ

ಟೆಹ್ರಾನ್, ಜ.೧೧- ‘ನಮ್ಮ ಸೇನೆಯ ಅಚಾತುರ್ಯದಿಂದ ೧೭೬ ಜನರನ್ನು ಹೊತ್ತೊಯ್ಯುತ್ತಿದ್ದ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದೆ. ನಾವು ಉದ್ದೇಶಪೂರ್ವಕವಾಗಿ ಈ ಕೃತ್ಯ ಮಾಡಿಲ್ಲ’ ಎಂದು ಇರಾನ್ ಇಂದು ಘೋಷಿಸಿದೆ. ‘ಅಮೆರಿಕದ ಹುಚ್ಚು ಸಾಹಸದಿಂದ ಉಂಟಾದ ಬಿಕ್ಕಟ್ಟಿನ ಸಮಯದಲ್ಲಿ ಮಾನವ ದೋಷವು ಈ ಅನಾಹುತಕ್ಕೆ ಕಾರಣವಾಗಿದೆ. ನಮ್ಮ ಪ್ರಜೆಗಳಲ್ಲಿ, ಬಲಿಪಶುವಾದ ಕುಟುಂಬಗಳ ಇತರ ಪೀಡಿತ ರಾಷ್ಟ್ರಗಳಿಗೆ ನಾವು ತೀವ್ರ ವಿಷಾದ, ಕ್ಷಮೆಯಾಚನೆ ಹಾಗೂ ಸಂತಾಪ ಸೂಚಿಸುತ್ತೇವೆ’ಎಂದು ಇರಾನ್‌ನ ವಿದೇಶಾಂಗ ಸಚಿವ ಜಾವೆದ್ ಝಾರೀಫ್ ಟ್ವೀಟ್ ಮಾಡಿದ್ದಾರೆ.

ಉಕ್ರೇನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ಗೆ ಸೇರಿರುವ ಬೊಯಿಂಗ್ ೭೩೭ ವಿಮಾನ ಟೇಕಾಫ್ ಆದ ಬಳಿಕ ಟೆಹ್ರಾನ್‌ನ ಹೊರವಲಯದಲ್ಲಿ ಬುಧವಾರ ಬೆಳಗ್ಗೆ ಪತನಗೊಂಡಿತ್ತು. ಇರಾನ್, ಅಮೆರಿಕ ಪಡೆಗಳ ಮೇಲೆ ಕ್ಷಿಪಣಿಗಳ ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ ಉಕ್ರೇನ್ ವಿಮಾನ ಪತನಗೊಂಡಿತ್ತು. ಉಕ್ರೇನ್ ವಿಮಾನವನ್ನು ತಾನು ನಡೆಸಿದ ಕ್ಷಿಪಣಿ ದಾಳಿಯಿಂದ ಪತನಗೊಂಡಿದೆ ಎಂಬುದನ್ನು ಇರಾನ್ ಹಲವು ಬಾರಿ ನಿರಾಕರಿಸಿತು. ಆದರೆ, ಇರಾನ್ ದೇಶವೇ ವಿಮಾನವನ್ನು ಪತನಗೊಳಿಸಿದೆ ಎಂದು ಗುಪ್ತಚರ ಮೂಲವನ್ನು ಉಲ್ಲೇಖಿಸಿ ಅಮೆರಿಕ, ಬ್ರಿಟನ್ ಹಾಗೂ ಕೆನಡಾ ಆರೋಪಿಸಿದ್ದವು. ವಿಮಾನವು ೧೬೭ ಪ್ರಯಾಣಿಕರು ಹಾಗೂ ೯ ಸಿಬ್ಬಂದಿಗಳೊಂದಿಗೆ ಉಕ್ರೇನ್ ರಾಜಧಾನಿ ಕೀವ್‌ಗೆ ತೆರಳುತ್ತಿತ್ತು. ವಿಮಾನದಲ್ಲಿ ಇರಾನ್‌ನ ೮೨, ಕೆನಡಾದ ಕನಿಷ್ಠ ೬೩ ಹಾಗೂ ಉಕ್ರೇನ್‌ನ ೧೧ ನಾಗರಿಕರು ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Comment