ಅಗ್ನಿ ದುರಂತ 17 ಮಂದಿ ಸಾವು : ದೆಹಲಿಯ ಅರ್ಪಿತ ಹೋಟೆಲ್‌ನಲ್ಲಿ ಅವಗಡ 45 ಮಂದಿ ಪಾರು

ನವದೆಹಲಿ, ಫೆ. ೧೨- ರಾಜಧಾನಿ ದೆಹಲಿಯಲ್ಲಿ ಇಂದು ನಸುಕಿನಲ್ಲಿ ಹೊಟೇಲ್‌ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ. ಹೊಟೇಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ 45 ಜನರನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಪಾರು ಮಾಡಿದೆ.

  • ದೆಹಲಿಯಲ್ಲಿ ಭೀಕರ ಅಗ್ನಿ ದುರಂತ.
  •  ಹೊತ್ತಿ ಉರಿದ ಖಾಸಗಿ ಹೊಟೇಲ್‌.
  •  17 ಮಂದಿ ಸಾವು.
  •  45 ಜನರ ರಕ್ಷಣೆ.
  •  ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ.
  •  ಗಾಢ ನಿದ್ರೆಯಲ್ಲಿದ್ದಾಗ ಅಗ್ನಿ ಅವಘಡ.
  •  30 ಅಗ್ನಿಶಾಮಕ ವಾಹನದಿಂದ ಪರಿಹಾರ ಕಾರ್ಯ.

ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖೆಗೆ ದೆಹಲಿ ಸರ್ಕಾರ ಆದೇಶಿಸಿದೆ. ಆದರೆ, ಶಾರ್ಟ್‌ಸರ್ಕ್ಯೂಟ್‌ನಿಂದಲೇ ಈ ಅವಘಡ ಸಂಭವಿಸಿದೆ ಎಂದು ಬಲವಾದ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ಕರೋಲ್‌ಬಾಗ್‌ನಲ್ಲಿರುವ ಅರ್ಪಿತ್ ಪ್ಯಾಲೆಸ್‌ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದವರು ಮುಂಜಾನೆ ಗಾಢ ನಿದ್ರೆಗೆ ಜಾರಿದ್ದರು. ಏಕಾಏಕಿ 4.30ರ ಸಮಯದಲ್ಲಿ ಬೆಂಕಿತಗುಲಿದೆ. ನೋಡನೋಡುತ್ತಿದ್ದಂತೆ, ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡಕ್ಕೆ ಆವರಿಸಿ, ನಿದ್ರೆಯಲ್ಲಿದ್ದ ಜನರು ಗಾಬರಿಯಿಂದ ಹೊರಗೋಡಿ ಬರಲು ಸಾಧ್ಯವಾಗದೆ, ದಟ್ಟವಾದ ಕಪ್ಪುಹೊಗೆಯಿಂದ ಉಸಿರುಗಟ್ಟಿ ಕೆಲವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ, 30ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಪರಿಹಾರ ಕಾರ್ಯಾಚರಣೆಗಿಳಿಯಿತು. ಹೊಟೇಲ್‌ನಲ್ಲಿ ಸಿಕ್ಕಿಹಾಕಿಕೊಂಡವರನ್ನು ಸುರಕ್ಷಿತವಾಗಿ ಪಾರು ಮಾಡಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. 45 ಮಂದಿಯನ್ನು ಸುರಕ್ಷಿತವಾಗಿ ಪಾರುಮಾಡಿ ಅವರೆಲ್ಲರನ್ನೂ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರು ಕಟ್ಟಡದಿಂದ ಜಿಗಿದು ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹೊಟೇಲ್‌ನಲ್ಲಿ ಮರದಲ್ಲಿ ನಿರ್ಮಿಸಿದ್ದ ಕಾರಿಡಾರ್‌ ಕೂಡ ಬೆಂಕಿಯ ಕೆನ್ನಾಲಿಗೆ ಧಗಧಗನೆ ಹೊತ್ತಿ ಉರಿದಿದ್ದರಿಂದ ಜನರು ಈ ಜಾಗವನ್ನು ತೆರವಿಗೆ ಬಳಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಅಗ್ನಿಶಾಮಕ ಅಧಿಕಾರಿ ವಿಪಿನ್ ಕೆಂಟಾಲ್ ತಿಳಿಸಿದ್ದಾರೆ.

ಈ ಹೊಟೇಲ್‌ನಲ್ಲಿ ನಿರಾಪೇಕ್ಷಣಾ ಪತ್ರ ಹಾಗೂ ಅಗ್ನಿ ಅವಘಡ ಸಂಭವಿಸಿದಾಗ ಹೊರಬರುವ ಜಾಗವಿರಲಿಲ್ಲ. ಇದರಿಂದಾಗಿ ಹೆಚ್ಚಿನ ಜನರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ತಮ್ಮವರನ್ನು ಕಳೆದುಕೊಂಡ ಸಂಬಂಧಿಕರ ಆಕ್ರಂಧನ ಮುಗಿಲುಮುಟ್ಟಿತ್ತು.

ಅಕ್ಟೋಬರ್ 2005ರಲ್ಲಿ ಈ ಹೋಟೆಲ್‌ಗೆ ಮೊದಲ ಬಾರಿಗೆ ಅನುಮತಿ ನೀಡಲಾಗಿತ್ತು. ಪ್ರತಿ ವರ್ಷ ಪರವಾನಗಿ ನವೀಕರಿಸಲಾಗುತ್ತಿತ್ತು. ಹೋಟೆಲ್‌ನ 2ನೇ ಅಂತಸ್ತಿನಲ್ಲಿ ಮುಂಜಾನೆ 3.30ರ ಸಮಯದಲ್ಲಿ ಬೆಂಕಿ ಬಿದ್ದಿರುವ ಬಗ್ಗೆ ಮಾಹಿತಿ ತಿಳಿದಿದೆ. ಇದು ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಸಂಭವಿಸಿರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಈ ಮಧ್ಯೆ ಗೃಹ ಸಚಿವ ಸತ್ಯೇಂದರ್ ಜೈನ್ ಹೊಟೇಲ್‌ಗೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಅಗ್ನಿ ಅವಘಡದ ಬಗ್ಗೆ ಮ್ಯಾಜಿಸ್ಟ್ರೇಟ್ ಅವರಿಂದ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 4 ರಿಂದ 5 ಅಂತಸ್ತಿರುವ ಕಟ್ಟಡಗಳ ಪರಿಶೀಲನೆ ನಡೆಸಿ, ಅಗ್ನಿದುರಂತ ಸಂಭವಿಸಿದಾಗ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಿ, ಒಂದು ವಾರದೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.

ಘಟನೆಯಲ್ಲಿ ಬಹುತೇಕ ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಸಾಮಾನ್ಯವಾಗಿ 4 ಅಂತಸ್ತಿನ ಕಟ್ಟಡ ನಿರ್ಮಿಸಲು ಅನುಮತಿ ನೀಡಲಾಗುತ್ತದೆ. ಆದರೆ ಈ ಹೋಟೆಲ್‌ನ ನಕ್ಷೆ ಪರಿಶೀಲಿಸಿದ್ದು, ಟೆರೆಸ್‌ನಲ್ಲಿ ಟೇಬಲ್ ಮತ್ತು ಚೇರ್‌ಗಳನ್ನು ಹಾಕಲಾಗಿದ್ದು, ಒಳಗಡೆ ಕೊಠಡಿಗಳೂ ಇವೆ. ಇವೆಲ್ಲವೂ ಮರದಲ್ಲೇ ನಿರ್ಮಿಸಿರುವುದು ಕಂಡುಬಂದಿದೆ ಎಂದು ಹೇಳಿದರು.

ಪ್ರಧಾನಿ ಸಂತಾಪ
ದೆಹಲಿಯ ಕರೋಲ್‌ಬಾಗ್‌ನಲ್ಲಿರುವ ಗುರುದ್ವಾರ್ ರಸ್ತೆಯಲ್ಲಿರುವ ಅರ್ಪಿತ್ ಪ್ಯಾಲೇಸ್ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಪ್ರಧಾನಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

Leave a Comment