ಅಗಸ ಜಾತಿ ಸೂಚಕ ರದ್ದು ಮಾಡಲು ಮನವಿ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜ ೨೨- ಮಡಿವಾಳ ಜನಾಂಗವನ್ನು ಅಗಸ, ಅಗಸಗಿತ್ತಿ ಎಂದು ಕರೆಯುವ ಜಾತಿ ಸೂಚಕ ಪದ್ಧತಿಯನ್ನು ರದ್ದುಗೊಳಿಸಿ ಸಮಾಜದ ಎಲ್ಲರನ್ನು ಮಡಿವಾಳ ಎಂದು ಗೌರವಯುತವಾಗಿ ಕರೆಯುವ ಕಾನೂನಿಗೆ ತಿದ್ದುಪಡಿ ತರಬೇಕೆಂದು ಮಡಿವಾಳದ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ಫೆ 1 ರಂದು ನಿಜಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ರಾಜ್ಯ ಸರ್ಕಾರದಿಂದ ಅದ್ದೂರಿಯಾಗಿ ಆಚರಿಸುತ್ತಿದ್ದು ಈ ಸಂದರ್ಭದಲ್ಲಿ ವೃತ್ತಿಯ ಹೆಸರಿನಲ್ಲಿ ಸಮುದಾಯವನ್ನು ಸಂಭೋದಿಸುವ ಪರಿಪಾಠವನ್ನು ನಿಷೇಧಿಸಬೇಕು. ತಾಂತ್ರಿಕವಾಗಿ ಮುಂದುವರೆದಿರುವ ಆಧುನಿಕ ಯುಗದಲ್ಲೂ ನಮ್ಮ ಸಮುದಾಯವನ್ನು ಜಾತಿ ಸೂಚಕವಾಗಿ ಕರೆಯುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಮುಂಬರುವ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಇದಕ್ಕೆ ತಿದ್ದುಪಡಿ ಮಸೂದೆ ಮಂಡಿಸಿ ಅನುಮೋದನೆ ಪಡೆದು ಶರಣ ಸಂಸ್ಕೃತಿಗೆ ತನ್ನದೇ ಆದ ಮಹತ್ವದ ಕೊಡುಗೆ ನೀಡಿರುವ ಮಾಚಿ ದೇವರ ಆಶಯವನ್ನು ಈಡೇರಿಸಬೇಕೆಂದು ಸಂಘದ ಅಧ್ಯಕ್ಷ ಆರ್.ವೆಂಕಟರಮಣ ಸುದ್ದಿ ಗೋಷ್ಠಿಯಲ್ಲಿ ಮನವಿ ಮಾಡಿದರು.
ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದವರ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ತಕ್ಷಣವೇ ಕ್ರಮ ಕೈಗೊಳ್ಳುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ವಿಳಂಬ ಮಾಡದೇ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಹಿಂದೆ ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಅನ್ನಪೂರ್ಣಮ್ಮ ನೇತೃತ್ವದಲ್ಲಿ ಸಮಿತಿ ರಚಿಸಿದ್ದು ಈ ಸಮಿತಿ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಶಿಫಾರಸ್ಸು ಮಾಡಿದೆ.
ಸಚಿವ ಸಂಪುಟದಲ್ಲೂ ಈ ವಿಚಾರ ಚರ್ಚೆಯಾಗಿತ್ತಾದರೂ ನೆನೆಗುದ್ದಿಗೆ ಬಿದ್ದಿದೆ. ಕೂಡಲೇ ಈ ವರದಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು.
ಮಡಿವಾಳ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಮಡಿವಾಳ ಅಭಿವೃದ್ದಿ ನಿಗಮವನ್ನು ಸರ್ಕಾರ ಘೋಷಿಸಿದ್ದು ಮುಖ್ಯಮಂತ್ರಿ ಅವರು ಮಾಚಿದೇವರ ಜಯಂತಿ ಕಾರ್ಯಕ್ರಮ ದಿನದಂದು ನಿಗಮವನ್ನು ಲೋಕಾರ್ಪಣೆ ಮಾಡಿ ನಿಗಮಕ್ಕೆ 25 ಕೋಟಿ ರೂ. ಅನುದಾನ ಘೋಷಣೆ ಮಾಡಬೇಕೆಂದು ಮನವಿ ಮಾಡಿದರು.
ಸುದ್ದಿ ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ದೀಪಕ್, ಪುಟ್ಟರಂಗಯ್ಯ, ಉಪಾಧ್ಯಕ್ಷ ಬಿ.ಆರ್.ಪ್ರಕಾಶ್ ಉಪಸ್ಥಿತರಿದ್ದರು.

Leave a Comment