ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ: ತ್ಯಾಗಿಗೆ ಜಾಮೀನು

ನವದೆಹಲಿ,ಸೆ.೧೨- ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ಸಂಪಾದನೆಯ ಪ್ರಮುಖ ಆರೋಪಿಯಾಗಿರುವ ಭಾರತೀಯ ವಾಯುಸೇನೆ (ಐಎಎಫ್)ಯ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ ಮತ್ತು ಇತರರಿಗೆ ಕೋರ್ಟ್ ಬುಧವಾರ ಜಾಮೀನು ನೀಡಿದೆ.

ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರು ತ್ಯಾಗಿ ಹಾಗೂ ಅವರ ಸೋದರ ಸಂಬಂಧಿಗೆ ಜಾಮೀನು ಮಂಜೂರು ಮಾಡಿದ್ದು, ಒಂದು ಲಕ್ಷ ಮೌಲ್ಯದ ಬಾಂಡ್ ಹಾಗೂ ಖಾತರಿ ಹಣ ನೀಡುವಂತೆ ಆದೇಶಿಸಿದ್ದಾರೆ. ತ್ಯಾಗಿ ಸೇರಿದಂತೆ ಹಲವು ಆರೋಪಿಗಳ ವಿರುದ್ಧ ನೀಡಿದ್ದ ಸಮನ್ಸ್ ಅನ್ವಯ ಕೋರ್ಟ್‌ಗೆ ಹಾಜರಾಗಿದ್ದ ವೇಳೆ ಇಬ್ಬರಿಗೂ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

ಅಗಸ್ಟಾ ವೆಸ್ಟ್‌ಲ್ಯಾಂಡ್‌ನ ಮಾಜಿ ನಿರ್ದೇಶಕ ಗ್ಯುಸೆಪ್ಪೆ ಒರ್ಸಿ, ಬ್ರುನೊ ಸ್ಪಗ್ನೊಲಿನಿ, ತ್ಯಾಗಿ ಮತ್ತು ಇತರ ಆರೋಪಿಗಳ ವಿರುದ್ಧ ಜುಲೈ ೨೪ರಂದು ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು.

ಇದೇ ಪ್ರಕರಣ ಸಂಬಂಧ ಕೋರ್ಟ್ ಇಟಲಿಯ ಮಧ್ಯವರ್ತಿ ಕಾರ್ಲೊ ಗೆರೊಸಾ ಮತ್ತು ದುಬೈನ ಉದ್ಯಮಿ ರಾಜೀವ್ ಸಕ್ಸೇನಾ ಅವರಿಗೂ ಜಾಮೀನು ರಹಿತ ವಾರಂಟ್ ನೀಡಿತ್ತು.

ಅಲ್ಲದೇ ಆರು ಪ್ರಮುಖ ಆರೋಪಿಗಳನ್ನು ಹೊರತುಪಡಿಸಿ ಭಾರತದ ೨೮, ವಿದೇಶಿ ಪ್ರಜೆಗಳು ಹಾಗೂ ಕಂಪನಿಗಳಿಗೂ ಸಮನ್ಸ್ ಜಾರಿ ಮಾಡಿತ್ತು. ಆದರೆ ವಿದೇಶಿ ಆರೋಪಿಗಳು ಹಾಗೂ ಕಂಪನಿಗಳು ಇಂದಿನ ವಿಚಾರಣೆಯಲ್ಲಿ ಹಾಜರಾಗಿಲ್ಲ ಎಂದು ಮೂಲಗಳು ತಿಳಿಸಿದೆ.

Leave a Comment