ಅಗತ್ಯ ಸೌಕರ್ಯಗಳಿಗಾಗಿ ಆಶಾ ಕಾರ್ಯಕರ್ತರ ಪ್ರತಿಭಟನೆ

ಬಳ್ಳಾರಿ, ಮೇ.29: ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು ಎಂಬ ಬೇಡಿಕೆ ಸೇರಿದಂತೆ ಮತ್ತಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಕೊರೊನಾ ಸೋಂಕು ತಡೆಗಟ್ಟುವಲ್ಲಿ ಮೊದಲ ಹಂತದ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರಿಗೆ 10 ಸಾವಿರ ರೂ ಪ್ರೋತ್ಸಾಹ ಧನ ನೀಡಬೇಕು, ಹಲ್ಲೆಗೊಳಗಾದವರಿಗೆ ಚಿಕಿತ್ಸಾ ವೆಚ್ಚ ನೀಡಿ, ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ಸರ್ಕಾರ ತಕ್ಷಣ ಸ್ಪಂದಿಸುವ ಕಾರ್ಯ ಆಗಬೇಕು. ಕಳೆದ ಎರಡುವರೆ ತಿಂಗಳಿಂದ ಆಶಾ ಕಾರ್ಯಕರ್ತೆಯರು ಕೊರೊನಾ ಸೋಂಕು ತಡೆಯಲು ಹಗಲಿರುಳು ಶ್ರಮವಹಿಸಿದ್ದಾರೆ. 50ಕ್ಕೂ ಹೆಚ್ಚು ಕಡೆಗಳಲ್ಲಿ ದೌರ್ಜನ್ಯ ನಡೆದಿದೆ. ಮದ್ಯಪಾನ ಮಾಡಿದವರಿಂದ ಹೆಚ್ಚು ದೌರ್ಜನ್ಯ ನಡೆದಿದೆ. ಕೆಲ ಪ್ರಕರಣಗಳಲ್ಲಿ ಸರ್ಕಾರ ಕೂಡಲೇ ಸ್ಪಂದಿಸಿದರೆ ಅನೇಕ ಪ್ರಕರಣಗಳಲ್ಲಿ ವಿಳಂಬ ಮಾಡಿದೆ. ಕೇಂದ್ರ ಸರ್ಕಾರ 2ಸಾವಿರ ರೂ ಪ್ರೋತ್ಸಾಹ ಧನ ನೀಡಿದೆ. ರಾಜ್ಯ ಸರ್ಕಾರ 3 ಸಾವಿರ ರೂ ನೀಡುವುದಾಗಿ ಹೇಳಿದೆ. ಬೇರೆ ಬೇರೆ ವೃತ್ತಿಗಳಲ್ಲಿರುವವರಿಗೆ 5 ಸಾವಿರ ನೀಡಿರುವ ಸರ್ಕಾರ ಆಶಾ ಕಾರ್ಯಕರ್ತೆರಿಗೆ ಮಾಸಿಕ 10 ಸಾವಿರ ಪ್ರೋತ್ಸಾಹ ಧನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇನ್ನು ಕೆಲ ಸೂಕ್ಷ್ಮ ಪ್ರದೇಶಗಳಿಗೆ ಕಾರ್ಯನಿರ್ವಹಿಸಲು ತಂಡಗಳಾಗಿ ಕಳುಹಿಸಿ ಪೊಲೀಸ್ ಭದ್ರತೆ ಒದಗಿಸಬೇಕು, ದೌರ್ಜನ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ದೌರ್ಜನ್ಯ ಒಳಗಾದವರ ಚಿಕಿತ್ಸೆಗೆ ಪರಿಹಾರ ನೀಡಬೇಕು, ಕರ್ತವ್ಯ ನಿರ್ವಹಿಸಲು ಮಾಸ್ಕ್, ಸ್ಯಾನಿಟೈಸರ್ ನೀಡಬೇಕು, ಕೊರೊನಾ ಕಾಲದಲ್ಲಿ ಮೃತಪಟ್ಟ ಆಶಾಗಳಿಗೆ 50 ಲಕ್ಷ ವಿಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಮುಖಂಡರುಗಳಾದ ನಾಗಲಕ್ಷ್ಮಿ ಎ.ದೇವದಾಸ್, ಸೋಮಶೇಖರಗೌಡ, ಶಾಂತ, ರಾಜೇಶ್ವರಿ, ಅಂಬಿಕಾ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Share

Leave a Comment