ಅಗತ್ಯ ವಸ್ತು ಪೂರೈಕೆ ಪರಿಶೀಲನೆ – ಅಧಿಕಾರಿಗಳಿಗೆ ಸೂಚನೆ

ಲಾಕ್ ಡೌನ್ : ನಗರ ಪ್ರದೇಶ ವಾರ್ಡ್ ಶಾಸಕರ ಸಂಚಾರ
ರಾಯಚೂರು.ಮಾ.26- ಕೊರೊನಾ ತಡೆಯುವ ಹಿನ್ನೆಲೆಯಲ್ಲಿ 21 ದಿನಗಳ ಲಾಕ್ ಡೌನ್ ನಗರ ಪ್ರದೇಶಗಳಲ್ಲಿ ಉಂಟಾದ ಪರಿಸ್ಥಿತಿ ಪರಿಶೀಲಿಸಲು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಇಂದು ವಾರ್ಡ್‌ಗಳಲ್ಲಿ ಸಂಚರಿಸಿ, ಅಲ್ಲಿಯ ಸ್ಥಿತಿಗತಿ ಪರಿಶೀಲಿಸಿ, ಜನರು ಯಾವುದಕ್ಕೂ ಭಯಭೀತಗೊಳ್ಳದಿರುವಂತೆ ಹೇಳಿದರು.
ಅವರಿಂದು ನಗರದ ವಾರ್ಡ್ ನಂ.3, 4, 5, 13, 18 ಸೇರಿದಂತೆ ಇನ್ನಿತರ ವಾರ್ಡ್‌ಗಳಲ್ಲಿ ಸಂಚರಿಸಿ, ಅಲ್ಲಿಯ ಪರಿಸ್ಥಿತಿ ಪರಿಶೀಲಿಸಿದರು. ಈಗಾಗಲೇ 21 ದಿನಗಳ ಲಾಕ್ ಡೌನ್‌ ಹಿನ್ನೆಲೆಯಲ್ಲಿ ಜನರಿಗೆ ಉಂಟಾಗಬಹುದಾದ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ವಾರ್ಡ್‌ನಲ್ಲೂ ಅಲ್ಲಿಯ ಸ್ಥಳೀಯರಿಗೆ ಬೇಕಾದ ಸೌಲಭ್ಯ ದೊರೆಕಿಸಿಕೊಡುವಂತೆ ಮಾಡುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ನಿತ್ಯ ಗ್ಯಾಸ್, ಕಿರಾಣಿ ದಿನಸು, ಕುಡಿವ ನೀರು ಹಾಗೂ ಇನ್ನಿತರ ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಪೂರಕ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ, ತಹಶೀಲ್ದಾರರು ಮತ್ತು ನಗರಸಭೆ ಅಧಿಕಾರಿಗಳು ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿರುವುದು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಿರಲು ಪ್ರಮುಖ ಕಾರಣವಾಗಿದೆ. ಜಿಲ್ಲೆಯಲ್ಲಿ ಕೈಗೊಂಡ ಪೂರ್ವ ಸಿದ್ಧತೆ ಅತ್ಯಂತ ಸಮರ್ಪಕವಾಗಿವೆ.
ಮುಂದಿನ 15 ದಿನಗಳ ಕಾಲ ಜನರಿಗೆ ಯಾವುದೇ ತೊಂದರೆಯಾಗದಂತೆ ನಾನು ಸೇರಿದಂತೆ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕರು ಯಾರೂ ಸಹ ಆತಂಕಕ್ಕೆ ಗುರಿಯಾಗದೇ, ಅಗತ್ಯ ವಸ್ತುಗಳ ಬಗ್ಗೆ ಏನಾದರೂ ಬೇಡಿಕೆಯಿದ್ದರೇ, ಈಗಾಗಲೇ ಜಿಲ್ಲಾಡಳಿತ ನೀಡಿದಂತಹ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಇಲ್ಲವಾದರೇ, ಸ್ಥಳೀಯ ನಗರಸಭೆ ಸದಸ್ಯರು ಮತ್ತು ನನ್ನನ್ನು ಸಂಪರ್ಕಿಸಿದರೇ, ತಕ್ಷಣವೇ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ.
ಜಿಲ್ಲೆಯಲ್ಲಿ ಕೊರೊನಾ ಯಾವುದೇ ಪ್ರಕರಣ ಪತ್ತೆಯಾಗದಿರುವುದರಿಂದ ಜನ ಮುಂಜಾಗ್ರತಾ ಕ್ರಮ ವಹಿಸುವ ಮೂಲಕ ಇದನ್ನು ತಡೆಯಲು ಕಟ್ಟುನಿಟ್ಟಿನ ಜಾಗೃತಿ ವಹಿಸಿ ಮನೆಯಿಂದ 21 ದಿನಗಳ ಕಾಲ ಹೊರ ಬರದಿರುವಂತೆ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಮನವಿ ಮಾಡಿದ್ದಾರೆ. ಈ ಕುರಿತು ಸಂಜೆವಾಣಿಯೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಗೆ ಎಲ್ಲಾ ರೀತಿಯ ಅಗತ್ಯ ವಸ್ತು ಪೂರೈಕೆಯ ಸ್ವತಃ ತಾವು ಮುಂದೆ ನಿಂತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Leave a Comment